ಪುತ್ತೂರು: ಪ್ರಧಾನ ಮಂತ್ರಿ ವಿರುದ್ಧ ಫೇಸ್ ಬುಕ್ ಪೇಜ್ನಲ್ಲಿ ಪುತ್ತೂರು ನಗರಯೋಜನಾ ಪ್ರಾಧಿಕಾರದ ಅಧ್ಯಕ್ಷ ಅಮಳ ರಾಮಚಂದ್ರ ಅವರು ಅವಹೇಳನಕಾರಿಯಾಗಿ ಪೋಸ್ಟ್ ಮಾಡಿದ್ದಾರೆಂದು ಆರೋಪಿಸಿ ಪುತ್ತೂರು ಬಿಜೆಪಿಯಿಂದ ಪೊಲೀಸ್ ಠಾಣೆಗೆ ಇಂದು ದೂರು ನೀಡಲಾಯಿತು.
ಮಾಜಿ ಶಾಸಕ ಸಂಜೀವ ಮಠಂದೂರು ಅವರ ನೇತೃತ್ವದಲ್ಲಿ ಬಿಜೆಪಿ ಮಂಡಲದ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಪುತ್ತೂರು ನಗರ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಜಾನ್ಸನ್ ಡಿಸೋಜ ಅವರಿಗೆ ದೂರು ನೀಡಿದ್ದಾರೆ.

ಅಮಳ ರಾಮಚಂದ್ರ ಅವರು ಮೇ 12ರಂದು ಭಾರತದ ಪ್ರಧಾನಿ ನರೇಂದ್ರ ಮೋದಿಯವರ ಬಗ್ಗೆ ಅಸಹ್ಯಕರವಾಗಿ ಬರಹವನ್ನು ಬರೆದಿರುತ್ತಾರೆ. ಜೊತೆಗೆ ಪ್ರಧಾನಿಯವರನ್ನು ಅಣಕಿಸುವ ಅನೇಕ ಪೋಸ್ಟ್ ಗಳನ್ನು ಅವರು ಫೇಸ್ ಬುಕ್ ಪೇಜ್ನಲ್ಲಿ ಪೋಸ್ಟ್ ಮಾಡಿರುವುದು ದೇಶದ ಉನ್ನತ ಹುದ್ದೆಯಲ್ಲಿರುವ ಪ್ರಧಾನಿಯವರಿಗೆ ಮಾಡಿದ ಅವಮಾನವಾಗಿದೆ.

ದೇಶದಲ್ಲಿ ಸಂವಿಧಾನಿಕವಾಗಿ ಅಧಿಕಾರದಲ್ಲಿರುವ ಪ್ರಧಾನಿ ನರೇಂದ್ರ ಮೋದಿಯವರ ಬಗ್ಗೆ ಕೀಳು ಭಾವನೆಯನ್ನು ಹಬ್ಬಿಸುವುದು, ಪ್ರಚಾರ ಮಾಡುವುದು ದೇಶದ ಭದ್ರತೆಯ ಬಗ್ಗೆ ಕೀಳು ಭಾವನೆಯನ್ನು ಬಿಂಬಿಸುವುದು ದೇಶ ದ್ರೋಹದ ಕೆಲಸವಾಗಿದೆ.

ಇದು ಬಿಜೆಪಿ ಕಾರ್ಯಕರ್ತರಾದ ನಮಗೆ ಬೇಸರ ಆಗಿದೆ. ಅಲ್ಲದೆ ದೇಶದ ಪ್ರಧಾನಿಯವರಿಗೆ ಅವಮಾನ ಮಾಡಿದ್ದಾಗಿದೆ. ಈ ನಿಟ್ಟಿನಲ್ಲಿ ದೇಶದ ಪ್ರಧಾನಿಯವರನ್ನು ಅವಮಾನ ಮಾಡಿದ ಅಮಳರಾಮಚಂದ್ರ ಅವರ ಬಗ್ಗೆ ತನಿಖೆ ನಡೆಸಿ ಅವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಬಿಜೆಪಿ ದೂರಿನಲ್ಲಿ ತಿಳಿಸಿದೆ.
ಈ ಸಂದರ್ಭ ಬಿಜೆಪಿ ಗ್ರಾಮಾಂತರ ಮಂಡಲದ ಅಧ್ಯಕ್ಷ ದಯಾನಂದ ಶೆಟ್ಟಿ ಉಜಿರೆಮಾರು, ನಗರ ಮಂಡಲದ ಅಧ್ಯಕ್ಷ ಶಿವ ಕುಮಾರ್ ಕಲ್ಲಿಮಾರು, ನಗರಸಭೆ ಅಧ್ಯಕ್ಷೆ ಲೀಲಾವತಿ ಅಣ್ಣು ನಾಯ್ಕ್, ಸ್ಥಾಯಿ ಸಮಿತಿ ಅಧ್ಯಕ್ಷ ಸುಂದರ ಪೂಜಾರಿ ಬಡಾವು, ಮಾಜಿ ಅಧ್ಯಕ್ಷ ಜೀವಂಧರ್ ಜೈನ್,ಶಶಿಧರ್ ನಾಯಕ್, ನಾಗೇಂದ್ರ ಬಾಳಿಗ, ನಿರಂಜನ್,ರಾಜೇಶ್ ಬನ್ನೂರ್,ಸುರೇಶ್ ಆಳ್ವ, ನಗರಸಭೆ ಅಧ್ಯಕ್ಷೆ ಲೀಲಾವತಿ ಅಣ್ಣು ನಾಯ್ಕ್ ಸಹಿತ ಬಿಜೆಪಿ ಮಂಡಲದ ಪದಾದಿಕಾರಿಗಳು ಕಾರ್ಯಕರ್ತರು ಉಪಸ್ಥಿತರಿದ್ದರು.


