ಸರಕಾರಿ ಪ್ರೌಢಶಾಲೆ, ನಾರ್ಶ ಮೈದಾನದಲ್ಲಿ ಸಂಭ್ರಮ ಶನಿವಾರದ ಅಂಗವಾಗಿ ವಿಶೇಷ ಚೇತನವುಳ್ಳ ವ್ಯಕ್ತಿಗಳೊಂದಿಗೆ ಸಂವಾದ ಕಾರ್ಯಕ್ರಮವನ್ನು ಯಶಸ್ವಿಯಾಗಿ ಹಮ್ಮಿಕೊಳ್ಳಲಾಯಿತು.

ಈ ಕಾರ್ಯಕ್ರಮಕ್ಕೆ ಶಾಲೆಯ ಹಿರಿಯ ವಿದ್ಯಾರ್ಥಿ ಹಾಗೂ ವಿಶೇಷ ಚೇತನ ವಿದ್ಯಾರ್ಥಿಯಾದ ಅಜಯ್ ಅವರನ್ನು ವಿಶೇಷ ಅತಿಥಿಯಾಗಿ ಆಹ್ವಾನಿಸಲಾಗಿತ್ತು. ಶಾಲೆಯ ಮುಖ್ಯ ಶಿಕ್ಷಕರಾದ ಗೋಪಾಲಕೃಷ್ಣ ನೇರಳಕಟ್ಟೆ ಅವರು ಅಜಯ್ ಅವರನ್ನು ಆತ್ಮೀಯವಾಗಿ ಸ್ವಾಗತಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ಅಜಯ್ ವಿಶೇಷ ಚೇತನ ವಿದ್ಯಾರ್ಥಿಯಾಗಿದ್ದರೂ ತಮ್ಮ ಪ್ರೌಢಶಾಲಾ ದಿನಗಳಲ್ಲಿ ಶಾಲೆಯ ಮೇಲೆ ಅಪಾರ ಪ್ರೀತಿ, ಕಾಳಜಿ ಮತ್ತು ಬದ್ಧತೆಯನ್ನು ತೋರಿದ ವಿದ್ಯಾರ್ಥಿ ಎಂದು ತಿಳಿಸಿದರು. ಅವರ ಅಕ್ಷರ ಬರವಣಿಗೆಯ ಶೈಲಿ, ಯಾವುದೇ ಪೂರ್ವ ಸಿದ್ಧತೆ ಇಲ್ಲದೆ ಮಾತನಾಡುವ ಕೌಶಲ್ಯ ಹಾಗೂ ಆತ್ಮವಿಶ್ವಾಸವನ್ನು ವಿದ್ಯಾರ್ಥಿಗಳಿಗೆ ಪರಿಚಯಿಸಿದರು.

ವಿದ್ಯಾರ್ಥಿಗಳಿಗೆ ವಿಶೇಷ ಚೇತನರ ಸಾಮರ್ಥ್ಯಗಳ ಬಗ್ಗೆ ಅರಿವು ಮೂಡಿಸುವುದರ ಜೊತೆಗೆ, ಸರ್ಕಾರದಿಂದ ದೊರೆಯುವ ಸೌಲಭ್ಯಗಳು ಹಾಗೂ ವಿಶೇಷ ಚೇತನರನ್ನು ಪ್ರೀತಿ, ಗೌರವ ಮತ್ತು ವಿಶ್ವಾಸದಿಂದ ಕಾಣುವ ಅಗತ್ಯತೆಯ ಬಗ್ಗೆ ಮನದಟ್ಟು ಮಾಡಲಾಯಿತು.
ಪ್ರಸ್ತುತ ದ್ವಿತೀಯ ಪಿಯುಸಿ ವ್ಯಾಸಂಗ ಮಾಡುತ್ತಿರುವ ಅಜಯ್, ತಮ್ಮ ಶಾಲಾ ದಿನಗಳ ಅನುಭವಗಳನ್ನು ಹಂಚಿಕೊಂಡರು. ಶಿಕ್ಷಕರಿಂದ ದೊರೆತ ಪ್ರೀತಿ, ಕಾಳಜಿ ಹಾಗೂ ಶಾಲೆಯ ಮೇಲಿನ ತಮ್ಮ ಅಭಿಮಾನವನ್ನು ಹೃದಯಸ್ಪರ್ಶಿಯಾಗಿ ವಿವರಿಸಿದರು.

ಕಾರ್ಯಕ್ರಮದಲ್ಲಿ ಶಿಕ್ಷಕಿಯರಾದ ಕ್ಷಮಾ ಕುಮಾರಿ ಸ್ವಾಗತಿಸಿದರು. ಭಾರತಿ ಸಿ. ವಂದಿಸಿದರು. ಶುಭಾ ಕಾರ್ಯಕ್ರಮ ನಿರ್ವಹಣೆ ಮಾಡಿದರು.
ಅಬ್ದುಲ್ ರಫೀಕ್ ಸರ್, ಸವಿತಾ ಮೇಡಂ ಮತ್ತು ಅನಿಲ್ ಸರ್ ಅವರ ಸಹಕಾರದೊಂದಿಗೆ ಕಾರ್ಯಕ್ರಮ ಯಶಸ್ವಿಯಾಗಿ ಮುಕ್ತಾಯವಾಯಿತು.

