ತೆಕ್ಕಾರು: ಮುಸ್ಲಿಮ್ ಮುಖಂಡರ ಜತೆ ಸಭೆ ನಡೆಸಿ ವಿಷಾದ ಪತ್ರ ಬರೆದ ಶ್ರೀ ಗೋಪಾಲಕೃಷ್ಣ ದೇವಳದ ಆಡಳಿತ ಮಂಡಳಿ

ಬೆಳ್ತಂಗಡಿ: ತೆಕ್ಕಾರು ಶ್ರೀ ಗೋಪಾಲಕೃಷ್ಣ ದೇವಸ್ಥಾನದ ಬ್ರಹ್ಮಕಲಶೋತ್ಸವ ವೇದಿಕೆಯಲ್ಲಿ ಶಾಸಕ ಹರೀಶ್ ಪೂಂಜಾ ಗ್ರಾಮದ ಮುಸ್ಲಿಮರ ವಿರುದ್ದ ಅತ್ಯಂತ ಅವಹೇಳನಕಾರಿ, ದ್ವೇಷ ಭಾಷಣ ಮಾಡಿದ ಹಿನ್ನೆಲೆ ಮುಸ್ಲಿಂ ಮುಖಂಡರು ಈ ಮೊದಲು ದೇವಸ್ಥಾನದ ನಿಲುವು ಪ್ರಶ್ನಿಸಿದ್ದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ದೇವಸ್ಥಾನದ ಆಡಳಿತ ಮಂಡಳಿ ಸ್ಥಳೀಯ ಮುಸ್ಲಿಮ್ ಮುಖಂಡರ ಜತೆ ಸಭೆ ನಡೆಸಿ ವಿಷಾದ ಪತ್ರ ಬರೆದಿದೆ.


ಮೇ 3ರಂದು ರಾತ್ರಿ ತೆಕ್ಕಾರು ಶ್ರೀ ಗೋಪಾಲಕೃಷ್ಣ ದೇವಸ್ಥಾನದ ಬ್ರಹ್ಮಕಲಶೋತ್ಸವ ಕಾರ್ಯಕ್ರಮದಲ್ಲಿ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ, ಊರಿನ ಮುಸ್ಲಿಮರ ವಿರುದ್ದ ಕೋಮು ಪ್ರಚೋದನಕಾರಿಯಾಗಿ ಮಾತನಾಡಿದ್ದು ಈ ಬಗ್ಗೆ ಗ್ರಾಮದ ಮುಸ್ಲಿಂ ಒಕ್ಕೂಟ ದೇವಸ್ಥಾನದ ಆಡಳಿತ ಮಂಡಳಿಗೆ ತಮ್ಮ ನಿಲುವನ್ನು ವ್ಯಕ್ತಪಡಿಸಲು ಪತ್ರವನ್ನು ಬರೆದಿದ್ದರು. ಇದಕ್ಕೆ ದೇವಸ್ಥಾನದ ಆಡಳಿತ ಮಂಡಳಿ ಪತ್ರದ ಮೂಲಕ ಪ್ರತಿಕ್ರಿಯೆ ನೀಡಿದೆ.

ಪತ್ರದಲ್ಲಿ”ನಮ್ಮ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಆಡಿರುವ ಕೆಲವು ಮಾತುಗಳು ಗ್ರಾಮಸ್ಥರ ಮನಸಿಗೆ ಬೇಸರ ತಂದಿದೆ. ಇದಕ್ಕೆ ದೇವಸ್ಥಾನದ ಆಡಳಿತ ಮಂಡಳಿ ವಿಷಾದ ವ್ಯಕ್ತಪಡಿಸುತ್ತದೆ. ನಿಮ್ಮ ಸಮುದಾಯದ ಸಹಕಾರವನ್ನು ಆಡಳಿತ ಮಂಡಳಿಯವರು ಸ್ವಾಗತಿಸುತ್ತಾರೆ. ಮುಂದೆ ಸಹ ಎಲ್ಲಾ ಸಮುದಾಯದವರು ಒಬ್ಬರಿಗೊಬ್ಬರು ಸಹಕಾರದೊಂದಿಗೆ ಬದುಕಬೇಕೆಂಬುದೇ ನಮ್ಮ ಆಶಯ” ಎಂದಿದ್ದಾರೆ.

Leave a Reply

Your email address will not be published. Required fields are marked *