ರೌಡಿ ಶೀಟರ್ ಲೋಕಿ ಯಾನೆ ಲೋಕೇಶ್ ಕೋಡಿಕೆರೆ ಅರೆಸ್ಟ್

ಮಂಗಳೂರು: ಸುಹಾಸ್ ಶೆಟ್ಟಿ ಕೊಲೆಗೆ ಪ್ರತಿಯಾಗಿ ನಗರದ ಕೊಂಚಾಡಿಯಲ್ಲಿ ಮೀನು ವ್ಯಾಪಾರಿಗೆ ಚೂರಿ ಇರಿತಕ್ಕೆ ಯತ್ನಿಸಿದ ಪ್ರಕರಣ ಸಂಬಂಧಿಸಿ ರೌಡಿ ಶೀಟರ್ ಲೋಕಿ ಯಾನೆ ಲೋಕೇಶ್ ಕೋಡಿಕೆರೆ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.

ಮೇ 2ರಂದು ದಕ್ಷಿಣ ಕನ್ನಡ ಜಿಲ್ಲೆ ಬಂದ್ ಘೋಷಣೆ ಸಂದರ್ಭ ಮೀನು ವ್ಯಾಪಾರಿ ಮೊಹಮ್ಮದ್ ಲುಕ್ಮಾನ್ ಎಂಬ ಯುವಕನಿಗೆ ಹಲ್ಲೆಗೈದು ಕಲ್ಲು ಎತ್ತಿ ಹಾಕಿ ಕೊಲ್ಲುವ ಯತ್ನವನ್ನು ನಡೆಸಲಾಗಿತ್ತು. ಬೆಳ್ಳಂ ಬೆಳಗ್ಗೆ ಇನ್ನೋವಾ ಕಾರಿನಲ್ಲಿ ಬಂದಿದ್ದ ಆರು ಮಂದಿಯ ತಂಡ ಈ ಕೃತ್ಯ ನಡೆಸಿತ್ತು. ಆನಂತರ, ಸ್ಥಳೀಯ ಮಹಿಳೆಯೊಬ್ಬರು ಬೊಬ್ಬೆ ಹಾಕಿದ್ದರಿಂದ ಆ ತಂಡ ಯುವಕನನ್ನು ಬಿಟ್ಟು ಪರಾರಿಯಾಗಿತ್ತು.

ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಲಿಖಿತ್, ರಾಕೇಶ್, ಧನರಾಜ್ ಮತ್ತು ಪ್ರಶಾಂತ್ ಶೆಟ್ಟಿ ಎಂಬ ನಾಲ್ಕು ಮಂದಿಯನ್ನು ಪೊಲೀಸರು ಬಂಧಿಸಿದ್ದರು. ಇವರು ರೌಡಿ ಶೀಟರ್ ಲೋಕಿಯ ಸಹಚರರು ಅಂತ ಹೇಳಲಾಗುತ್ತಿದೆ. ಲೋಕಿ ಹೇಳಿದ್ದರಿಂದ ಈ ಕೃತ್ಯ ಮಾಡಿದ್ದೇವೆಂದು ಆರೋಪಿಗಳು ಒಪ್ಪಿಕೊಂಡಿದ್ದರಿಂದ ಪೊಲೀಸರು ಲೋಕೇಶ್ ನನ್ನು ಬಂಧನ ಮಾಡಿದ್ದಾರೆ ಎಂದು ತಿಳಿದು ಬಂದಿದೆ.

ಇತ್ತ ಸಾಮಾಜಿಕ ಜಾಲತಾಣಗಳಲ್ಲೂ ಲೋಕೇಶ್ ಕೋಡಿಕೆರೆ ಫೋಟೋವನ್ನೂ ದುಷ್ಕರ್ಮಿಗಳು ಹಾಕಿದ್ದು ಮುಂದಿನ ಟಾರ್ಗೆಟ್ ಇವನೇ ಅನ್ನುವ ಪೋಸ್ಟ್ ಕೂಡ ವೈರಲ್ ಆಗಿತ್ತು. ಜಿಲ್ಲೆಯಲ್ಲಿ ಸುಹಾಸ್ ಶೆಟ್ಟಿ ಕೊಲೆ ಪ್ರಕರಣದ ನಂತರ ಮಂಗಳೂರು ಪೊಲೀಸ್ ಕಮಿಷನರ್ ಅನುಪಮ್ ಅಗರ್ವಾಲ್ ಸೂಚನೆಯಂತೆ, ಎಲ್ಲ ಠಾಣೆಗಳ ವ್ಯಾಪ್ತಿಯಲ್ಲೂ ಕೋಮು ದ್ವೇಷದ ಪ್ರಕರಣಗಳ ಹಿನ್ನೆಲೆಯಿರುವ ಆರೋಪಿಗಳ ಲಿಸ್ಟ್ ಮಾಡಲಾಗಿದೆ. ಅವರ ಮೇಲೆ ನಿಗಾ ಇಡುವುದು, ಅಗತ್ಯ ಬಿದ್ದರೆ ವಶಕ್ಕೆ ಪಡೆಯುವ ಕೆಲಸಗಳನ್ನು ಮಾಡಲಾಗುತ್ತಿದೆ.

ಲೋಕೇಶ್ ಕೋಡಿಕೆರೆಯನ್ನೂ ಇದೇ ಹಿನ್ನೆಲೆಯಲ್ಲಿ ವಶಕ್ಕೆ ಪಡೆದಿದ್ದು, ಈತನ ಸಹಚರರೇ ಕೃತ್ಯ ಎಸಗಿದ್ದು ಕಂಡು ಬಂದಿದ್ದರಿಂದ ಅರೆಸ್ಟ್ ಮಾಡಿದ್ದಾರೆ ಅನ್ನುವ ಮಾಹಿತಿ ಇದೆ.ಲೋಕಿ ಕೋಡಿಕೆರೆ ವಿರುದ್ಧ ಸುರತ್ಕಲ್ ಮತ್ತು ಪಣಂಬೂರು ಠಾಣೆಗಳಲ್ಲಿ ರೌಡಿ ಲಿಸ್ಟ್ ಇದೆಯೆಂದು ಕಾವೂರು ಪೊಲೀಸರು ಮಾಹಿತಿ ನೀಡಿದ್ದಾರೆ.

Leave a Reply

Your email address will not be published. Required fields are marked *