Breaking
23 Mar 2026, Mon

ಸಾಮಾಜಿಕ ಜಾಲತಾಣದಲ್ಲಿ ದ್ವೇಷಪೂರಿತ ಪೋಸ್ಟ್‌: ಮಂಗಳೂರು ಕಮಿಷನರ್‌ ಖಡಕ್‌ ಎಚ್ಚರಿಕೆ

ಮಂಗಳೂರು: ಹಿಂದೂ ಕಾರ್ಯಕರ್ತ ಸುಹಾಸ್‌ ಶೆಟ್ಟಿ ಹತ್ಯೆ ಬಳಿಕ ಸಾಮಾಜಿಕ ಜಾಲತಾಣದಲ್ಲಿ ದ್ವೇಷಪೂರಿತ ಪೋಸ್ಟ್‌ ಗಳು ಹೆಚ್ಚಾಗಿ ಹರಡಿದ್ದು ಈ ಕುರಿತು ಮಂಗಳೂರು ಕಮಿಷನರ್‌ ಖಡಕ್‌ ಎಚ್ಚರಿಕೆ ನೀಡಿದ್ದಾರೆ.

ಫೇಸ್‌ಬುಕ್‌, ಇನ್‌ಸ್ಟಾಗ್ರಾಂ, ವಾಟ್ಸಾಪ್‌ ಗ್ರೂಪ್‌ ಮತ್ತು ಇತರ ಸಾಮಾಜಿಕ ಜಾಲತಾಣಗಳಲ್ಲಿ ಕೋಮು ದ್ವೇಷ, ಸುಳ್ಳು ಮಾಹಿತಿ ಮತ್ತು ಬೆದರಿಕೆ ಸಂದೇಶಗಳನ್ನು ಪೋಸ್ಟ್‌ ಮಾಡಿದ್ದಲ್ಲಿ ಅದನ್ನು ಪೊಲೀಸ್‌ ಇಲಾಖೆ ಅತ್ಯಂತ ಗಂಭೀರವಾಗಿ ಪರಿಗಣಿಸಲಿದೆ ಎಂದು ಪೊಲೀಸ್‌ ಆಯುಕ್ತ ಅನುಪಮ್‌ ಅಗರ್‌ವಾಲ್‌ ತಿಳಿದ್ದಾರೆ.

ಇಂತಹ ಪೋಸ್ಟ್‌ ಅತೀ ಹೆಚ್ಚಾಗಿ ವೈರಲ್‌ ಆಗಿದ್ದು ಒಂದು ವಾರದಲ್ಲಿ ಮಂಗಳೂರು ನಗರ ಪೊಲೀಸ್‌ ಕಮಿಷನರೇಟ್‌ ವ್ಯಾಪ್ತಿಯ ವಿವಿಧ ಠಾಣೆಗಳಲ್ಲಿ 30ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ. ಈ ಪ್ರಕರಣಗಳನ್ನು ಸೆನ್‌ ಕ್ರೈಂ ಪೊಲೀಸ್‌ ಠಾಣೆಯ ಎಸಿಪಿ ನೇತೃತ್ವದ ವಿಶೇಷ ತಂಡ ತನಿಖೆ ನಡೆಸುತ್ತಿದ್ದು, ಈಗಾಗಲೇ ಹಲವು ಮಂದಿಯ ವಿಚಾರಣೆ ನಡೆಸಲಾಗಿದೆ ಎಂದಿದ್ದಾರೆ.

ಕೆಲವರು ನಕಲಿ ಪ್ರೊಫೈಲ್‌ಗ‌ಳು ಅಥವಾ ವಿದೇಶದಲ್ಲಿ ನೋಂದಾಯಿತ ಖಾತೆಗಳ ಮೂಲಕ ಸುಳ್ಳು ಪೋಸ್ಟ್‌ ಗಳನ್ನು ಹಾಕುತ್ತಿದ್ದಾರೆ. ಇಂತಹ ಖಾತೆಗಳನ್ನು ಪತ್ತೆ ಹಚ್ಚಲಾಗುವುದಿಲ್ಲ ಎಂಬ ಅಭಿಪ್ರಾಯವಿದೆ. ಆದರೆ ಎಲ್ಲೇ ಖಾತೆ ರಚಿಸಿದರೂ ಪತ್ತೆ ಹಚ್ಚಿ ಕ್ರಮ ಕೈಗೊಳ್ಳಬಹುದು. ಆದ್ದರಿಂದ ಯುವಜನರು ತಮ್ಮ ಭವಿಷ್ಯ ಮತ್ತು ಉದ್ಯೋಗವನ್ನು ಗಮನದಲ್ಲಿರಿಸಿ ಸಾಮಾಜಿಕ ಜಾಲತಾಣದಲ್ಲಿ ಬರೆಯುವ ಮೊದಲು ಎಚ್ಚರ ವಹಿಸಬೇಕು ಎಂದು ಆಯುಕ್ತರು ವಾರ್ನಿಂಗ್‌ ನೀಡಿದ್ದಾರೆ.

ದ್ವೇಷ ಪೂರಿತ ಸಂದೇಶಗಳು ಬಂದರೆ ಅದನ್ನು ಫಾರ್ವರ್ಡ್‌ ಮಾಡುವ ಬದಲು ಸೆನ್‌ ಪೊಲೀಸ್‌ ಠಾಣೆಯನ್ನು ಸಂಪರ್ಕಿಸಿ ಮಾಹಿತಿ ನೀಡಬೇಕು. ಮಂಗಳೂರನ್ನು ಶಾಂತ, ಕಾನೂನುಬದ್ಧ ಮತ್ತು ಏಕತೆಯ ನಗರವನ್ನಾಗಿಸಲು ಎಲ್ಲರ ಸಹಕಾರ ಅಗತ್ಯ. ಆದ್ದರಿಂದ ಸಾಮಾಜಿಕ ಜಾಲತಾಣಗಳನ್ನು ಬಳಸುವಾಗ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು ಎಂದು ಅವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *