ನವದೆಹಲಿ: ಪಹಲ್ಗಾಮ್ ದಾಳಿಯ ಬಳಿಕ ಭಾರತ ಮತ್ತ ನೆರೆ ರಾಷ್ಟ್ರ ಪಾಕಿಸ್ತಾನ ನಡುವಿನ ಬಾಂಧವ್ಯ ಮತ್ತಷ್ಟು ಬಿಗಡಾಯಿಸಿದ್ದು ಯುದ್ಧ ನಡೆಯುವುದು ಬಹುತೇಕ ನಿಶ್ಚಿತ ಅಂತ ಹೇಳಲಾಗ್ತ ಇದೆ.
ಕೇಂದ್ರ ಸರಕಾರ ಕೂಡ ಭದ್ರತಾ ಸಿದ್ಧತೆಗಳ ಕುರಿತು ದೊಡ್ಡ ಹೆಜ್ಜೆ ಇಟ್ಟಿದ್ದು ಇದಕ್ಕಾಗಿ ಭಾರತೀಯ ಸೇನೆಯು ಪೂರ್ವ ತಯಾರಿಗಳನ್ನು ಮಾಡಿಕೊಳ್ತಾ ಇದೆ. ಈ ನಿಟ್ಟಿನಲ್ಲಿ ಗೃಹ ಸಚಿವಾಲಯವು ದೇಶದ ಹಲವು ರಾಜ್ಯಗಳಿಗೆ ಮೇ 7 ರಂದು ನಾಗರಿಕ ರಕ್ಷಣಾ ಅಣಕು ಕವಾಯತು ಆಯೋಜಿಸುವಂತೆ ನಿರ್ದೇಶನ ನೀಡಿದೆ.

ಇತ್ತ ಭಾರತ ಪ್ರತೀಕಾರ ತೀರಿಸಿಕೊಳ್ಳುತ್ತದೆ ಎಂದು ಪಾಕಿಸ್ತಾನ ಭಯಪಡುತ್ತಿರುವ ಸಮಯದಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ಅಣಕು ಕವಾಯತಿನ ಅಡಿಯಲ್ಲಿ ವಾಯುದಾಳಿ ಎಚ್ಚರಿಕೆ ಸೈರನ್‌ಗಳನ್ನು ನಿರ್ವಹಿಸಲಾಗುತ್ತದೆ. ಇದು ಪ್ರಮುಖ ಅಪಾಯ ಮತ್ತು ಶತ್ರು ಚಟುವಟಿಕೆಗಳ ಕುರಿತು ಎಚ್ಚರಿಕೆಯನ್ನು ನೀಡುವುದಕ್ಕೆ ಸಂಬಂಧಿಸಿದ ಒಂದು ಹಂತವಾಗಿದೆ. ಈ ವೇಳೆ ಸಂಭವನೀಯ ದಾಳಿಗಳ ಸಂದರ್ಭ ನಾಗರಿಕರು ಮತ್ತು ವಿದ್ಯಾರ್ಥಿಗಳಿಗೆ ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಅಗತ್ಯವಾದ ತರಬೇತಿ ನೀಡಲಾಗುತ್ತದೆ.
ಇದರ ಅಡಿಯಲ್ಲಿ, ಶತ್ರುಗಳ ವೈಮಾನಿಕ ಕಣ್ಗಾವಲು ಅಥವಾ ದಾಳಿಯಿಂದ ನಗರಗಳು ಮತ್ತು ರಚನೆಗಳನ್ನು ಮರೆಮಾಡಲು ತುರ್ತು ಪ್ರೋಟೋಕಾಲ್‌ಗಳನ್ನು ಅಳವಡಿಸಲಾಗುತ್ತದೆ. ಒಟ್ಟು 244 ನಗರಗಳಲ್ಲಿ ಅಣಕು ಡ್ರಿಲ್ ನಡೆಸಲಾಗುತ್ತದೆ. ಇತ್ತ ನಾಳೆ ಬೆಂಗಳೂರಿನ ಎರಡು ಕಡೆ ಮಾಕ್ ಡ್ರಿಲ್ ನಡೆಸಲಾಗುತ್ತಿದೆ. ನಗರದ ಹಲಸೂರು ಕೆರೆಯ ಪಕ್ಕದಲ್ಲಿರುವ ಸಿವಿಲ್ ಡಿಫೆನ್ಸ್ ಕಚೇರಿಯ ಆವರಣ ಮತ್ತು ಬನ್ನೇರುಘಟ್ಟ ರಸ್ತೆಯ ಮುಂಡುಕೂರ್‌ನಲ್ಲಿ ಮಾಕ್ ಡ್ರಿಲ್ ನಡೆಸಲಾಗುತ್ತಿದೆ. ಈ ನಿಟ್ಟಿನಲ್ಲಿ ಸಿವಿಲ್ ಡಿಫೆನ್ಸ್ ಕಚೇರಿಯ ಆವರಣದಲ್ಲಿ ಇಂದು ಡಿಫೆನ್ಸ್ ಸಿಬ್ಬಂದಿ ಮಾಕ್ ಡ್ರಿಲ್‌ಗೆ ಸಿದ್ಧತೆ ನಡೆಸಿದ್ದಾರೆ. ಪ್ರಾಯೋಗಿಕವಾಗಿ ಸಿಬ್ಬಂದಿ ಸೈರನ್ ಮೊಳಗಿಸಿದ್ದಾರೆ.

ನಾಳಿನ ರಕ್ಷಣಾ ಮಾಕ್ ಡ್ರಿಲ್‌ಗೆ ರಾಜಧಾನಿಯಲ್ಲಿ ಭರ್ಜರಿ ಸಿದ್ಧತೆಗಳನ್ನು ಈಗಾಗಲೇ ಮಾಡಿಕೊಳ್ಳಲಾಗಿದೆ.ಹಲಸೂರು ಕೆರೆ ಪಕ್ಕದಲ್ಲಿರುವ ಸಿವಿಲ್ ಡಿಫೆನ್ಸ್ ಕಚೇರಿಯಲ್ಲಿರುವ ಆವರಣದಲ್ಲಿ ಸಿಬ್ಬಂದಿ ಪ್ರಾಯೋಗಿಕವಾಗಿ ಸೈರನ್ ಮೊಳಗಿಸಿದ್ದಾರೆ. ಬೆಂಗಳೂರಲ್ಲಿ ಮಾಕ್ ಡ್ರಿಲ್ ನಡೆಸುವ ಕುರಿತು ಬೆಂಗಳೂರು ನಗರ ಮತ್ತು ಗ್ರಾಮಾಂತರ ಡಿಸಿಗಳು ಹಾಗೂ ಅಧಿಕಾರಿಗಳು ಮಹತ್ವದ ಚರ್ಚೆ ನಡೆಸಿದ್ದಾರೆ. ಸಭೆಯಲ್ಲಿ ನಾಳಿನ ಮಾಕ್ ಡ್ರಿಲ್‌ಗೆ ಹಿರಿಯ ಅಧಿಕಾರಿಗಳಿಂದ ಸಿದ್ಧತೆ ಬಗ್ಗೆ ಈಗಾಗಲೇ ಪರಿಶೀಲನೆ ಮಾಡಲಾಗಿದೆ ಎಂದು ತಿಳಿದು ಬಂದಿದೆ. ಮಾತ್ರವಲ್ಲ ಇತ್ತ ರಾಯಚೂರಿನ ಶಕ್ತಿ ನಗರದಲ್ಲಿ ಸಂಜೆ 4 ಗಂಟೆಗೆ ಮಾಕ್ ಡ್ರಿಲ್ ನಡೆಯಲಿದೆ.

ಮಾಕ್ ಡ್ರಿಲ್ ಅಂದ್ರೆ ಏನ್ ಗೊತ್ತಾ..?
ಮಾಕ್ ಡ್ರಿಲ್‌ನಲ್ಲಿ ಒಂದು ಕಾಲ್ಪನಿಕ ತುರ್ತು ಪರಿಸ್ಥಿತಿಯ ಸೃಷ್ಟಿ ಮಾಡಲಾಗುತ್ತದೆ. ಸರ್ಕಾರ, ಭದ್ರತಾ ಸಿಬ್ಬಂದಿ, ಸಾರ್ವಜನಿಕರ ಸಿದ್ಧತೆ ಪರೀಕ್ಷಿಸುವ ಅಭ್ಯಾಸ ಇದಾಗಿದ್ದು ನೈಜ ಘಟನೆಯಂತೆಯೇ ನಡೆಯುತ್ತದೆ. ಯಾವುದೇ ಹಾನಿಯಾಗದಂತೆ ಎಚ್ಚರಿಕೆ ವಹಿಸಲಾಗುತ್ತದೆ.ಸಂಕಷ್ಟದ ಸನ್ನಿವೇಶಗಳನ್ನು ಅಣಕುಪ್ರದರ್ಶನ ಮಾಡಿ ಅಭ್ಯಾಸ ಮಾಡಲಾಗುತ್ತದೆ. ಸಾರ್ವಜನಿಕ ಸ್ಥಳಗಳಲ್ಲಿ ಭದ್ರತೆ, ಜನರ ರಕ್ಷಣೆಯ ಸಾಮರ್ಥ್ಯ ಬಲಪಡಿಸುವ ಉದ್ದೇಶದ ಜೊತೆಗೆ ಶತ್ರು ದಾಳಿ ವೇಳೆ ಸಾರ್ವಜನಿಕ ಸುರಕ್ಷತೆಯನ್ನು ಖಾತ್ರಿ ಪಡಿಸಲು ಅಗತ್ಯ ಸಿದ್ಧತೆ ಮಾಡಲು ಈ ಅಭ್ಯಾಸ ಮಾಡಲಾಗುತ್ತದೆ.

ಯಾವುದೇ ತುರ್ತು ಸಂದರ್ಭದಲ್ಲಿ ರಾಜ್ಯ ಸರ್ಕಾರಗಳು, ಪೊಲೀಸ್, ಆರೋಗ್ಯ ಇಲಾಖೆ ಮತ್ತು ಇತರ ಸಂಸ್ಥೆಗಳ ಸಮನ್ವಯ ಬೇಕಾಗುತ್ತದೆ. ಜನರಲ್ಲಿ ತುರ್ತು ಸನ್ನಿವೇಶದ ಬಗ್ಗೆ ಜಾಗೃತಿ ಮೂಡಿಸಿ ಸುರಕ್ಷಿತವಾಗಿರಲು ತರಬೇತಿ ನೀಡಲಾಗುತ್ತದೆ. ವಾಯುದಾಳಿಯ ಸಂದರ್ಭದಲ್ಲಿ ನಗರಗಳು ಮತ್ತು ಹಳ್ಳಿಗಳಲ್ಲಿ ಸಂಪೂರ್ಣ ವಿದ್ಯುತ್ ಕಡಿತ ಮಾಡಲಾಗುತ್ತದೆ. ರಾತ್ರಿ ವಾಹನಗಳ ಸಂಚಾರವನ್ನೂ ಸ್ಥಗಿತಗೊಳಿಸಲಾಗುತ್ತದೆ. ವೈರಿ ದೇಶಗಳಿಗೆ ಊರುಗಳ ಗುರುತು ಪತ್ತೆ ತಡೆಯಲು ಈ ಕ್ರಮ ಕೈಗೊಳ್ಳಲಾಗುತ್ತದೆ.
1999 ರ ಕಾರ್ಗಿಲ್ ಯುದ್ಧದ ಸಂದರ್ಭ ಈ ರೀತಿಯ ಮಾಕ್ ಡ್ರಿಲ್ ನಡೆದಿರಲಿಲ್ಲ. ಪಾಕಿಸ್ತಾನವೇ ನೇರವಾಗಿ ಯುದ್ಧಕ್ಕೆ ಧುಮುಕಿದ್ದರಿಂದ ಮಾಕ್ ಡ್ರಿಲ್ ಮಾಡಲು ಸಮಯ ಸಿಕ್ಕಿರಲಿಲ್ಲ.


