Breaking
22 Mar 2026, Sun

ಸಾಮಾಜಿಕ ಜಾಲತಾಣದಲ್ಲಿ ಪ್ರಚೋದನಕಾರಿ ಪೋಸ್ಟ್:‌ ಮೂವರ ವಿರುದ್ಧ ಪ್ರಕರಣ ದಾಖಲು

ಮಂಗಳೂರು: ಸುಹಾಸ್ ಶೆಟ್ಟಿ ಹತ್ಯೆ ಬಳಿಕ ದಕ್ಷಿಣ ಕನ್ನಡ ಜಿಲ್ಲೆ ಬೂದಿ ಮುಚ್ಚಿದ ಕೆಂಡದಂತಾಗಿದ್ದು ಕೆಲ ಹಿಂದೂ ಯುವಕರು ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶಭರಿತ ಪ್ರಚೋದನಕಾರಿ ಸಂದೇಶ ಹರಡಿದ್ದಾರೆ. ಈ ಬಗ್ಗೆ ನಿಗಾ ವಹಿಸಿದ ಪೊಲೀಸ್‌ ಇಲಾಖೆ ಮೂವರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದೆ.

ʼಸುಹಾಸ್ ಬಲಿದಾನ ವ್ಯರ್ಥವಾಗಲು ಬಿಡುವುದಿಲ್ಲ. ನಮ್ಮ ಬಲ ಈಗ ತೋರಿಸದಿದ್ದಲ್ಲಿ ಮುಂದೊಂದು ದಿನ ನಾವೇ ಇರುವುದಿಲ್ಲ’ ಎಂದು ವಾಟ್ಸಾಪ್ ಗ್ರೂಪ್‌ನಲ್ಲಿ ಸಂದೇಶ ಹಾಕಿದ್ದ ಮನೀಶ್‌ ಎಂಬಾತನ ವಿರುದ್ಧ ಕೊಣಾಜೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಬಳಿಕ ಸೆನ್ ಪೊಲೀಸ್ ಠಾಣೆಗೆ ಹಸ್ತಾಂತರಿಸಲಾಗಿತ್ತು.
ಈ ಕುರಿತು ತನಿಖೆ ನಡೆಸಿದ ಸೆನ್ ಪೊಲೀಸರು ಆರೋಪಿಯನ್ನು ಪತ್ತೆ ಹಚ್ಚಿ ವಿಚಾರಣೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.

ರಾಹುಲ್ ಶಿವಶಂಕರ್ ಎಂಬಾತ ʼಎಕ್ಸ್’ ಖಾತೆಯೊಂದರಲ್ಲಿ ‘ಕಾಂಗ್ರೆಸ್ ಸರಕಾರ ನೀಡಿದ್ದ 25 ಲಕ್ಷ ರೂ. ಪರಿಹಾರ ಪ್ಯಾಕೇಜ್‌ನಲ್ಲಿ ಆದಿಲ್ 3 ಲಕ್ಷ ರೂ. ಮೊತ್ತವನ್ನು ಸಫ್ವಾನ್‌ಗೆ ಸುಪಾರಿ ನೀಡಿದ್ದಾನೆ’ ಎಂದು ಪೋಸ್ಟ್ ಮಾಡಿದ್ದ. ಈ ಕುರಿತು ಉರ್ವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಾಂಗ್ರೆಸ್ ಪಕ್ಷದ ಪ್ರಮುಖರ ಹಳೆಯ ಫೋಟೋ ಬಳಸಿ ಸುಳ್ಳು ಮಾಹಿತಿಯನ್ನು ಫೇಸ್‌ಬುಕ್ ಪೇಜ್‌ನಲ್ಲಿ ಪೋಸ್ಟ್ ಮಾಡಿದ್ದ ವಿಕಾಶ್ ಪಿ. ಎಂಬಾತನ ವಿರುದ್ಧ ಸುರತ್ಕಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರತೀಕಾರದ ಆರೋಪದ ಮೇಲೆ ನಡೆಯುತ್ತಿರುವ ಹತ್ಯೆ ಪ್ರಕರಣಗಳ ಮೇಲೆ ಹದ್ದಿನ ಕಣ್ಣಿಟ್ಟಿರುವ ಪೊಲೀಸ್‌ ಇಲಾಖೆ ಸಾಮಾಜಿಕ ಜಾಲತಾಣದಲ್ಲಿ ಪ್ರಚೋದನಕಾರಿ ಸಂದೇಶ ಹರಡುತ್ತಿರುವವರಿಗೆ ಎಚ್ಚರಿಕೆ ನೀಡಿದೆ.

Leave a Reply

Your email address will not be published. Required fields are marked *