ಪಾಕಿಸ್ತಾನದ ಪ್ರಜೆಗಳಿಗೆ ಹೈ ಟೆನ್ಷನ್‌ ಕೊಟ್ಟ ಕೇಂದ್ರ: ಗಡುವಿನ ಒಳಗಡೆ ದೇಶ ತೊರೆಯದಿದ್ದರೆ 3 ವರ್ಷ ಜೈಲು ಶಿಕ್ಷೆ, 3 ಲಕ್ಷ ರೂ. ದಂಡ!

ದೆಹಲಿ: ಜಮ್ಮು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಭಯೋತ್ಪಾದಕರ ದಾಳಿ ಬಳಿಕ ಪಾಕಿಸ್ತಾನದ ವಿರುದ್ಧ ಭಾರತ ದಂಡನಾತ್ಮಕ ಕ್ರಮ ಜರುಗಿಸಿದ್ದು, ಭಾರತದಲ್ಲಿನ ಪಾಕಿಸ್ತಾನಿ ಪ್ರಜೆಗಳು 48 ಗಂಟೆಯೊಳಗೆ ಭಾರತ ತೊರೆಯಬೇಕು ಎಂದು ಹೇಳಿತ್ತು. ಅದಾಗ್ಯೂ ಭಾರತ ಬಿಟ್ಟು ಪಾಕಿಸ್ತಾನಕ್ಕೆ ವಾಪಾಸ್ಸಾಗದೆ ಇರುವ ಪಾಕ್‌ ಪ್ರಜೆಗಳಿಗೆ ಕಠಿಣ ಶಿಕ್ಷೆ ಹಾಗೂ ದಂಡ ವಿಧಿಸುವುದಾಗಿ ತಿಳಿಸಿದೆ.

ದಕ್ಷಿಣ ಏಷ್ಯಾ ಪ್ರಾದೇಶಿಕ ಸಹಕಾರ ಸಂಘಟನೆಯ ವೀಸಾ ಹೊಂದಿದ್ದವರಿಗೆ ಭಾರತ ತೊರೆಯಲು ಏಪ್ರಿಲ್ 26 ಕೊನೆಯ ದಿನಾಂಕವಾಗಿತ್ತು. ವೈದ್ಯಕೀಯ ವೀಸಾ ಹೊಂದಿದ್ದವರಿಗೆ ಏಪ್ರಿಲ್ 29 ಕೊನೆಯ ದಿನಾಂಕ ನಿಗದಿಯಾಗಿತ್ತು. ಅಲ್ಲದೆ, ಆಕಸ್ಮಿಕ ಪ್ರವೇಶ, ವ್ಯವಹಾರ, ಚಲನಚಿತ್ರ, ಪತ್ರಕರ್ತ, ಸಾರಿಗೆ, ಸಮ್ಮೇಳನ, ಪರ್ವತಾರೋಹಣ, ವಿದ್ಯಾರ್ಥಿ, ಸಂದರ್ಶಕ, ಗುಂಪು ಪ್ರವಾಸಿ, ಯಾತ್ರಿಕ ಮತ್ತು ಗುಂಪು ಯಾತ್ರಿಕ ವೀಸಾ ಹೊಂದಿದವರಿಗೂ ಏಪ್ರಿಲ್ 27 ಕೊನೆಯ ದಿನವಾಗಿತ್ತು. ಕೇಂದ್ರದ ಖಡಕ್‌ ಸೂಚನೆಯ ಬಳಿಕ ಅಟ್ಟಾರಿ-ವಾಘಾ ಗಡಿ ಮೂಲಕ ಶುಕ್ರವಾರ ಮತ್ತು ಶನಿವಾರ 272 ಪಾಕಿಸ್ತಾನಿ ಪ್ರಜೆಗಳು ಭಾರತವನ್ನು ತೊರೆದಿದ್ದಾರೆ ಎನ್ನಲಾಗಿದೆ. ಭಾನುವಾರದೊಳಗೆ ಇನ್ನೂ ಹಲವು ಜನರು ನಿರ್ಗಮಿಸಿದ್ದಾರೆ ಎಂದು ತಿಳಿದು ಬಂದಿದೆ. ಆದರೂ ಭಾರತದದೊಳಗೆ ಇನ್ನೂ ಪಾಕಿಸ್ತಾನಿ ಪ್ರಜೆಗಳು ನೆಲೆಸಿದ್ದು ಅವರೆಲ್ಲರಿಗೂ ಕೇಂದ್ರ ಸರಕಾರ ಮತ್ತೆ ಎಚ್ಚರಿಕೆಯ ಕರೆ ನೀಡಿದೆ.

ಗಡುವಿನೊಳಗೆ ಭಾರತದಿಂದ ಪಾಕಿಸ್ತಾನಕ್ಕೆ ಮರಳದಿದ್ದರೆ 3 ವರ್ಷಗಳವರೆಗೆ ಜೈಲು ಶಿಕ್ಷೆ ಅಥವಾ 3 ಲಕ್ಷ ರೂ. ದಂಡ ಅಥವಾ ಎರಡನ್ನೂ ವಿಧಿಸಲಾಗುತ್ತದೆ ಎಂದಿದೆ.

ವಲಸೆ ಮತ್ತು ವಿದೇಶಿಯರ ಕಾಯ್ದೆ 2025ರ ಪ್ರಕಾರ, ಗಡುವಿನೊಳಗೆ ಭಾರತವನ್ನು ತೊರೆಯದ ಪಾಕಿಸ್ತಾನಿ ಪ್ರಜೆಗಳನ್ನು ಬಂಧಿಸಬಹುದು, ವಿಚಾರಣೆಗೆ ಒಳಪಡಿಸಬಹುದು ಮತ್ತು ಗರಿಷ್ಠ ಮೂರು ವರ್ಷಗಳ ಜೈಲು ಶಿಕ್ಷೆ ಅಥವಾ ₹3 ಲಕ್ಷದ ದಂಡ ಅಥವಾ ಎರಡನ್ನೂ ವಿಧಿಸಬಹುದು.

Leave a Reply

Your email address will not be published. Required fields are marked *