ಬಂಟ್ವಾಳ: ಮಗಳ ಜೊತೆಗೆ ತಾಯಿ ಕೂಡ ಪಿಯುಸಿ ಪರೀಕ್ಷೆ ಬರೆದು ಉತ್ತೀರ್ಣರಾದ ವಿಚಾರ
ನರಿಕೊಂಬು ಗ್ರಾಮದ ಮಾಣಿಮಜಲು ಎಂಬಲ್ಲಿ ಬೆಳಕಿಗೆ ಬಂದಿದೆ.
ಸಿಡಿಪಿಒ ಇಲಾಖೆಯ ಅಂಗನವಾಡಿ ಕಾರ್ಯಕರ್ತೆಯಾದ ರವಿಕಲಾ(42) ಪರೀಕ್ಷೆ ಬರೆದು ಶೇ.೫೦ ಪರ್ಸೆಂಟ್ ಅಂಕಗಳನ್ನು ಪಡೆದು ತೇರ್ಗಡೆಯಾಗಿದ್ದಾರೆ.
ಇವರ ಮಗಳು ತ್ರಿಶಾ, ಪುತ್ತೂರು ವಿವೇಕಾನಂದ ಕಾಲೇಜಿನ ವಿದ್ಯಾರ್ಥಿನಿಯಾಗಿದ್ದು, ವಾಣಿಜ್ಯ ವಿಭಾಗದಲ್ಲಿ ಶೇ. 97.67 ಅಂಕಗಳನ್ನು ಗಳಿಸಿ ಉತ್ತೀರ್ಣರಾಗಿದ್ದಾಳೆ.
ಪರೀಕ್ಷೆ ಬರೆಯಲು ಇದೇ ಕಾರಣ ?
ಅಂದಹಾಗೆ ರವಿಕಲಾ ಅವರು 27 ವರ್ಷಗಳ ಬಳಿಕ ಪಿಯುಸಿ ಪರೀಕ್ಷೆ ಬರೆಯಲು ಕಾರಣವೊಂದಿದೆ. ಪತಿ ಹಾಗೂ ತನ್ನಿಬ್ಬರು ಹೆಣ್ಣು ಮಕ್ಕಳೊಂದಿಗೆ ವಾಸವಿರುವ ಇವರು ಬಡ ಕುಟುಂಬಸ್ಥರಾಗಿದ್ದಾರೆ. ಜೀವನೋಪಾಯಕ್ಕೆ ಬಂಟ್ವಾಳ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ತಾರಿಪಡ್ಪು ಅಂಗನವಾಡಿ ಕೇಂದ್ರದಲ್ಲಿ ಅಂಗನವಾಡಿ ಸಹಾಯಕಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇತ್ತೀಚೆಗೆ ಸರಕಾರದ ಅದೇಶವೊಂದು ರವಿಕಲಾ ಅವರಿಗೆ ಪಿಯುಸಿಯನ್ನು ಪಾಸ್ ಮಾಡಲು ಅವಕಾಶ ನೀಡಿದ್ದು ಕೌಟುಂಬಿಕ ಜೀವನದ ಬ್ಯುಸಿ ಮಧ್ಯೆಯೂ ಸಾಧನೆ ಮಾಡಿದ್ದಾರೆ.
ಅಂಗನವಾಡಿ ಕೇಂದ್ರಗಳಲ್ಲಿ ಎಲ್.ಕೆ.ಜಿ. ಮತ್ತು ಯುಕೆಜಿ ಶಿಕ್ಷಣ ಪ್ರಾರಂಭವಾಗುವುದರಿಂದ ಕಾರ್ಯಕರ್ತರು ಪಿಯುಸಿ ವರೆಗೆ ವಿದ್ಯಾಭ್ಯಾಸ ಮಾಡಿರಬೇಕು ಎಂಬ ಆದೇಶವನ್ನು ಸರಕಾರ ಹೊರಡಿಸಿತ್ತು. ಇದರಿಂದ ಆಘಾತಗೊಂಡ ಇವರಿಗೆ ಕೆಲಸದ ಅಭದ್ರತೆ ಕಾಡಿದ್ದು, ಕೆಲಸ ಕಳೆದುಕೊಂಡರೆ ಹೆಣ್ಮಕ್ಕಳ ಭವಿಷ್ಯದ ಮೇಲೆ ಪರಿಣಾಮ ಬೀರಬಹುದು ಎಂಬ ಆತಂಕವೂ ಹೆಚ್ಚಾಗಿತ್ತು. ಹೀಗಾಗಿ ಪಿಯುಸಿ ಪರೀಕ್ಷೆ ಬರೆಯಲು ಮುಂದಾದ ಇವರು ಕಲಾವಿಭಾಗವನ್ನು ಆರಿಸಿಕೊಂಡು ಬಿಸಿರೋಡಿನ ಪಿಯು ಕಾಲೇಜು ಮುಖಾಂತರ ಬಂಟ್ವಾಳದ ಮೊಡಂಕಾಪು ಕಾರ್ಮೆಲ್ ಕಾನ್ವೆಂಟ್ ಪ್ರೌಢ ಶಾಲೆಯಲ್ಲಿ ಪರೀಕ್ಷೆ ಬರೆದಿದ್ದಾರೆ.
ಪರೀಕ್ಷೆಯ ಸಿದ್ಧತೆಗೆ ಎದುರಾಗಿತ್ತು ಸಮಯದ ಅಭಾವ
ಲಿಖಿತ ಪರೀಕ್ಷೆಗಾಗಿ ಸಿದ್ದತೆ ನಡೆಸಿದ್ದ ರವಿಕಲಾ ಅವರಿಗೆ ಕೆಲಸದ ಒತ್ತಡ ಹೆಚ್ಚಾಗಿ, ಪರೀಕ್ಷೆಗಾಗಿ ಓದಿ ತಯಾರು ಮಾಡಲು ಸಾಕಷ್ಟು ಸಮಯ ಸಿಗಲಿಲ್ಲ. ಆದರೂ ಹಣ ಕಟ್ಟಿದ್ದೇನೆ ಎಂಬ ಒಂದೇ ಉದ್ದೇಶದಿಂದ ಪರೀಕ್ಷೆ ಬರೆದೆ ಸಿದ್ದ ಎಂಬ ಛಲದಲ್ಲೇ ಪರೀಕ್ಷೆಗೆ ಹಾಜರಾಗಿದ್ದರು.
ಪರೀಕ್ಷೆ ಹಾಲ್ ಗೆ ಹೋಗುವಾಗ ಒಂದು ರೀತಿಯ ಭಯ ಇವರನ್ನು ಕಾಡಿತ್ತು.
ಎಸ್.ಎಸ್.ಎಲ್.ಸಿ. ಪರೀಕ್ಷೆ ಬರೆದು 27 ವರ್ಷಗಳ ಬಳಿಕ ಮತ್ತೆ ಪರೀಕ್ಷಾ ಕೊಠಡಿಗೆ ತೆರಳಿದಾಗ ಅಲ್ಲಿರುವ ಮಗಳ ಪ್ರಾಯದ ವಿದ್ಯಾರ್ಥಿಗಳನ್ನು ಕಂಡಾಗ ಇವರಿಗೆ ಮುಜುಗರವಾಗಿತ್ತಂತೆ . ಮಗಳ ಹಾಲ್ ಟಿಕೆಟ್ ನೀಡಲು ಶಾಲೆಗೆ ಬಂದಿರಬೇಕು ಎಂದು ಭಾವಿಸಿ ಇವರನ್ನು ಕೆಲವರು ಮಾತನಾಡಿಸಿದ್ದು ಇವೆಲ್ಲವೂ ಇವರಿಗೆ ಇರಿಸುಮುರಿಸಿ ಮಾಡಿತ್ತು. ಆದರೂ ಧೈರ್ಯದಿಂದಲೇ ಪರೀಕ್ಷೆ ಬರೆದಿದ್ದಾರೆ.
ಈ ಕುರಿತು ಸಂತಸ ಹಂಚಿಕೊಂಡಿರುವ ರವಿಕಲಾ “ನನ್ನ ಗಂಡ ಇಬ್ಬರು ಮಕ್ಕಳು, ಕುಟುಂಬದ ಸದಸ್ಯರ ಸಹಕಾರ, ಇಲಾಖೆಯ ಪ್ರೋತ್ಸಾಹ ನನಗೆ ಪಿಯುಸಿ ಪಾಸ್ ಮಾಡಲು ಅವಕಾಶ ನೀಡಿದೆ. ಛಲ ಮತ್ತು ಸಾಧನೆ ಮಾಡಿದರೆ ಯಾವ ವಯಸ್ಸಿನಲ್ಲಿಯೂ ಪರೀಕ್ಷೆ ಬರೆದು ಯಶಸ್ಸು ಕಾಣಬಹುದು ಎಂಬುದು ನಾನುಕಂಡು ಕೊಂಡ ಸತ್ಯ ವಿಚಾರ. ಮಗಳ ಜೊತೆ ನಾನು ಪಿಯುಸಿ ಪರೀಕ್ಷೆ ಬರೆದೆ ಎಂಬ ಸಂತಸ ನನನಗಿದೆ” ಎಂದಿದ್ದಾರೆ.



