ಸುರತ್ಕಲ್: ಚಲಿಸುತ್ತಿದ್ದ ಎಕ್ಸ್‌ಪ್ರೆಸ್ ರೈಲು (12620) ಏರುವ ಸಂದರ್ಭ ಆಯತಪ್ಪಿ ಬೀಳುತ್ತಿದ್ದ ವೃದ್ಧರೋರ್ವರನ್ನು ನಿಲ್ದಾಣದ ಸ್ಟೇಷನ್ ಮಾಸ್ಟರ್ ಹಾಗೂ ಪಾಯಿಂಟ್ಸ್ಮೆನ್ ರಕ್ಷಿಸಿದ್ದಾರೆ.
ಮಂಗಳೂರು ಸೆಂಟ್ರಲ್- ಮುಂಬೈ ನಡುವೆ ಸಂಚರಿಸುವ ಮತ್ಸಗಂಧ ಎಕ್ಸ್‌ಪ್ರೆಸ್ ರೈಲು ಸುರತ್ಕಲ್ ನಿಲ್ದಾಣದಿಂದ ಪ್ರಯಾಣ ಆರಂಭಿಸಿದ ಬಳಿಕ ವೃದ್ದ ಪ್ರಯಾಣಿಕರೋರ್ವರು
ರೈಲು ಏರುವ ಯತ್ನ ನಡೆಸಿದ್ದು, ಈ ವೇಳೆ ಆಯತಪ್ಪಿದ್ದಾರೆ. ವೃದ್ಧ ಬೀಳುವುದನ್ನು ಕಂಡ ನಿಶಾನೆ ಧ್ವಜ ತೋರುವ ರೈಲ್ವೆ ಸಿಬ್ಬಂದಿ (ಪಾಯಿಂಟ್ಸ್ಮೆನ್) ಜಗದೀಶ್
ಹಾಗೂ ಸ್ಟೇಷನ್ ಮಾಸ್ಟರ್ ಮನೋಜ್ ಶೆಟ್ಟಿ ತಕ್ಷಣ ಅವರ ನೆರವಿಗೆ ಧಾವಿಸಿ, ವೃದ್ಧರನ್ನು ತಮ್ಮ ತೋಳಿಗೆ ತೆಗೆದುಕೊಂಡ ಸುರಕ್ಷಿತವಾಗಿ ನಿಲ್ದಾಣದಲ್ಲಿ ಇಳಿಸಿದ್ದಾರೆ.
ಬಳಿಕ ಅದೇ ರೈಲಿನಲ್ಲಿಯೇ ಅವರ ಪ್ರಯಾಣವನ್ನು ಮುಂದುವರಿಸಿದ್ದಾರೆ.
ಘಟನೆಯ ಬಗ್ಗೆ ಗಮನಹರಿಸಿದ ಕೊಂಕಣ ರೈಲ್ವೆ ಚೇರ್ಮನ್ ಮತ್ತು ವ್ಯವಸ್ಥಾಪಕ ನಿರ್ದೇಶಕ ಸಂತೋಷ್ ಕುಮಾರ್ ಝಾ ಅವರು, ಸಕಾಲದಲ್ಲಿ ವೃದ್ಧ ಪ್ರಯಾಣಿಕರ ನೆರವಿಗೆ ಧಾವಿಸಿದ ಜಗದೀಶ್ ಹಾಗೂ ಮನೋಜ್ ಶೆಟ್ಟಿ ಅವರಿಗೆ ತಲಾ 5,000 ರೂ ಬಹುಮಾನ ಪ್ರಕಟಿಸಿದ್ದಾರೆ.




