ವಿಟ್ಲ: ಪುಣಚ ಗ್ರಾಮ ಪಂಚಾಯತ್ ಸುವರ್ಣ ಸೌಧ ಸಭಾಂಗಣದಲ್ಲಿ 2024-25ನೇ ಸಾಲಿನ ದ್ವಿತೀಯ ಸುತ್ತಿನ ಗ್ರಾಮ ಸಭೆ ಗ್ರಾಮ ಪಂಚಾಯತ್ ಅಧ್ಯಕ್ಷೆ ಬೇಬಿ ಪಟಿಕ್ಕಲ್ಲು ಅವರು ಅಧ್ಯಕ್ಷತೆಯಲ್ಲಿ ನಡೆಯಿತು.
ನಿಗದಿತ ಸಮಯಕ್ಕೆ ಸಭೆ ಆರಂಭಿಸಲು ಅಣಿಯಾಗುತ್ತಿದ್ದಾಗ ಬೆರಳೆಣಿಕೆಯ ಗ್ರಾಮಸ್ಥರು ಮತ್ತು ಇಲಾಖಾಧಿಕಾರಿಗಳ ಅನುಪಸ್ಥಿತಿಯಲ್ಲಿ ಗ್ರಾಮ ಸಭೆ ನಡೆಸ ಬಾರದೆಂದು ಗ್ರಾಮಸ್ಥ, ಸಾಮಾಜಿಕ ಕಾರ್ಯಕರ್ತ ವೆಂಕಟ್ರಮಣ ನಾಯಕ್ ಆಜೇರು ಪಟ್ಟು ಹಿಡಿದರು.
ಕೆಲವಾರು ಇಲಾಖಾಧಿಕಾರಿಗಳ ಆಗಮನದ ನಂತರ ಮಾರ್ಗದರ್ಶನ ಅಧಿಕಾರಿಗಳ ಸೂಚನೆಯಂತೆ ಸಭೆ ಆರಂಭಗೊಂಡಿತು.ಸರಕಾರಿ ಅಧಿಕಾರಿಗಳು ಗುರುತು ಕಾರ್ಡುಗಳನ್ನು ಕಡ್ಡಾಯವಾಗಿ ಅಳವಡಿಸಿಕೊಳ್ಳಬೇಕು ಎಂದಾಗ ಕಡ್ಡಾಯ ಬೇಕಾಗಿಲ್ಲ ಎಂದು ಪಿಡಿಒ ಅವರಿಂದ ಸ್ಪಷ್ಟನೆ ಕೇಳಲಾಯಿತು.
ಗ್ರಾಮ ಸಭೆಗೆ ಸಂಬಂಧ ಪಟ್ಟ ಅಧಿಕಾರಿಗಳು ಬರಬೇಕೆಂದು ಲಿಖಿತ ಮನವಿ ಸಲ್ಲಿಸಿದ್ದರೂ ಬರಲಿಲ್ಲ ಯಾಕೆ.. ಎಂದು ಮಾರ್ಗದರ್ಶಿ ಅಧಿಕಾರಿಯಲ್ಲಿ ಪ್ರಶ್ನಿಸಿದ ಗ್ರಾಮಸ್ಥ ವೆಂಕಟ್ರಮಣ ನಾಯಕ್ ಸ್ವತಃ: ಕ್ಷೇತ್ರ ಶಿಕ್ಷಣಾಧಿಕಾರಿಯವರಿಗೆ ಪೋನ್ ಮಾಡಿ ಸಭೆಗೆ ಬರಲೇ ಬೇಕೆಂದು ಹಠ ಹಿಡಿದರು. ವಿದ್ಯಾರ್ಥಿಗಳ ಸಮವಸ್ತ್ರವನ್ನು ಸರಕಾರಿ ಶಾಲೆಗೆ ತಲುಪಿಸುವ ಜವಾಬ್ದಾರಿ ಯಾರದ್ದು ಎಂದು ಖುದ್ದು ಬಿಇಒ ಬಂದು ಸಭೆಯಲ್ಲಿ ತಿಳಿಸಬೇಕೆಂದು ಒತ್ತಾಯಿಸಿ, ಸಭೆ ಮುಂದೆ ಹೋಗಲು ಬಿಡೆನು ಎಂದು ಪಟ್ಟು ಹಿಡಿದರು.
ಮಾರ್ಗದರ್ಶಿ ಅಧಿಕಾರಿಯಲ್ಲಿ ತಾನು ಪರೀಕ್ಷೆ ಪ್ರಶ್ನೆ ಪತ್ರಿಕೆ ಸರಬರಾಜು ಮಾಡುವ ಕರ್ತವ್ಯದಲ್ಲಿರುವ ಕಾರಣ ಬರಲಾಗದು ಎಂದು ಕಾರಣ ನೀಡಿ ಮುಂದಿನ ಸಭೆಗೆ ಬರುತ್ತೇನೆ ಎಂದು ಭರವಸೆ ನೀಡಿದರು. ಬಿಇಒ ಬಗ್ಗೆ ತಾಲೂಕು ಕಾರ್ಯನಿರ್ವಹಣಾಧಿಕಾರಿಗೆ ದೂರು ನೀಡುತ್ತೇನೆ ಎಂದು ಹೇಳಿದ ಬಳಿಕ ಸಭೆ ಮುಂದುವರಿಯಿತು.
ಇದೇ ಸಂದರ್ಭದಲ್ಲಿ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡದೇ ಅವರಿಂದ ಅರ್ಜಿ ಸ್ವೀಕರಿಸಿ ಕಳೆದ ಐದಾರು ವರ್ಷಗಳಿಂದ ಸರ್ಕಾರ ಮೋಸ ಮಾಡುತ್ತಿದೆ ಎಂದು ಆರೋಪಿಸಿದರು. ಶಿಕ್ಷಣ ಇಲಾಖಾ ಸಿಆರ್ ಪಿಯವರ ಉತ್ತರದಿಂದ ಗ್ರಾಮಸ್ಥರು ಸಮಾಧಾನಗೊಳ್ಳಲಿಲ್ಲ.ಗ್ರಾಮಸ್ಥ, ರೈತಸಂಘದ ಜಿಲ್ಲಾಧ್ಯಕ್ಷ ಶ್ರೀಧರ ಶೆಟ್ಟಿ ಬೈಲುಗುತ್ತು ಬಡವರಿಗೆ ಸರ್ಕಾರದ ಸೌಲಭ್ಯಗಳನ್ನು ನೀಡಲು ಸತಾಯಿಸಬಾರದು ಎಂದು ಅಧಿಕಾರಿಗಳಿಗೆ ಸಲಹೆ ನೀಡಿದರು.
ಮಾರ್ಗದರ್ಶಿ ಅಧಿಕಾರಿಯಾಗಿ ಸಮಾಜಕಲ್ಯಾಣ ಇಲಾಖೆಯ ತಾಲೂಕು ಸಹಾಯಕ ನಿರ್ದೇಶಕಿ ಸುನೀತಾ ಭಾಗವಹಿಸಿದ್ದರು.ಆರೋಗ್ಯ, ಕಂದಾಯ, ಅರಣ್ಯ, ಗ್ರಾಮೀಣ ಕುಡಿಯುವ ನೀರು ಸರಬರಾಜು ಇಲಾಖೆ, ಪಶುಸಂಗೋಪನೆ, ಮೆಸ್ಕಾಂ ಇಲಾಖಾಧಿಕಾರಿಗಳು ಮಾಹಿತಿ ನೀಡಿದರು.
ಉಪಾಧ್ಯಕ್ಷ ಮಹೇಶ್ ಶೆಟ್ಟಿ ಬೈಲು ಗುತ್ತು, ಪಂಚಾಯತ್ ಸದಸ್ಯರಾದ ಲಲಿತಾ, ಗಿರಿಜಾ, ಪ್ರತಿಭಾ ಜಗನ್ನಾಥ ಗೌಡ, ಗಂಗಮ್ಮ, ರಾಮಕೃಷ್ಣ ಪೂಜಾರಿ, ಹರೀಶ್ ಪೂಜಾರಿ, ಸರೋಜಿನಿ, ಸುಜಾತ, ಉದಯಕುಮಾರ್ ದಂಬೆ, ಅಶೋಕ್ ಕುಮಾರ್, ವಾಣಿ ಶ್ರೀ, ರಾಜೇಶ್ ನಾಯ್ಕ, ಶಾರದಾ, ರೇಖಾ, ರೇಶ್ಮಾ, ತೀರ್ಥಾರಾಮ ಭಾಗವಹಿಸಿದ್ದರು.ಪಂಚಾಯತ್ ಗ್ರಂಥ ಸಹಾಯಕಿ ಜಯಲಕ್ಷ್ಮಿ ಪ್ರಾರ್ಥನೆ ಹಾಡಿದರು. ಪಂಚಾಯತ್ ಅಭಿವೃದ್ಧಿ ಅಧಿಕಾರಿ ರವಿ ಸ್ವಾಗತಿಸಿದರು.ಲೆಕ್ಕ ಸಹಾಯಕಿ ಪಾರ್ವತಿ ವರದಿ ಮಂಡಿಸಿದರು. ಪಂಚಾಯತ್ ಸಿಬ್ಬಂದಿಗಳು ಸಹಕರಿಸಿದರು.




