ವಿಟ್ಲ: ವಿಟ್ಲ ಪಂಚಲಿಂಗೇಶ್ವರ ದೇಗುಲದ ಸಭಾಭವನದಲ್ಲಿ ಮೆಸ್ಕಾಂ ಜನ ಸಂಪರ್ಕ ಸಭೆ ನಡೆಯಿತು.ವಿದ್ಯುತ್ ಬಳಕೆದಾರರಿಂದ ಹತ್ತಾರು ಬೇಡಿಕೆಗಳು, ಪ್ರಶ್ನೆಗಳು ಕೇಳಿ ಬಂದವು .
ಈ ಮೊದಲು ಜನ ಸಂಪರ್ಕ ಸಭೆಯಲ್ಲಿ ಇಟ್ಟ ಬೇಡಿಕೆಗಳನ್ನು ಈಡೇರಿಸದಿರಲು ಕಾರಣವೇನು? ಬಿಳಿಯೂರು ಗ್ರಾಮದ ಪೆರ್ನೆಯಲ್ಲಿ ನಾಗರೀಕರು ಹೋರಾಟ ಮಾಡಿ ಸ್ಥಾಪಿಸಿದ ವಿದ್ಯುತ್ ಪರಿವರ್ತಕವನ್ನು ಸುಮಾರು ೨೦ ದಿನಗಳ ಹಿಂದೆ ಏಕಾಏಕಿ ಸ್ಥಳಾಂತರ ಮಾಡಲಾಗಿದೆ. ಇದರಿಂದ ನೂರಾರು ಮನೆಗಳಿಗೆ ಲೋವೋಲ್ಟೇಜ್ ಸಮಸ್ಯೆ ಕಾಡುತ್ತಿದೆ. ಇದಕ್ಕೆ ಸ್ಪಷ್ಟನೆ ನೀಡಬೇಕು.
ಮಳೆಗಾಲದಲ್ಲಿ ವಿದ್ಯುತ್ ಅಡಚಣೆ ಆಗದ ರೀತಿಯಲ್ಲಿ ಕೈಗೊಂಡ ಕ್ರಮಗಳೇನು? ಯುಜಿ ಕೇಬಲ್ ಅಳವಡಿಕೆಗೆ ಹಾಕಿದ ಯೋಜನೆ ಈಡೇರದಿರಲು ಕಾರಣವೇನು ಎಂದು ಪೆರ್ನೆ ಗ್ರಾ.ಪಂ.ಸದಸ್ಯ ನವೀನ್ ಕುಮಾರ್ ಅವರು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ಕನ್ಯಾನ ನಿವಾಸಿ ಪರಶುರಾಮ ಮಾತನಾಡಿ ಇಲಾಖೆಯಿಂದ ನೀಡುತ್ತಿರುವ ಬಿಲ್ಲುಗಳು ಅಳಿಸಿಹೋಗಿ ಆಡಿಟ್ ಸಮಸ್ಯೆಯಾಗುತ್ತಿದೆ. ಹಲವು ಸಭೆಯಲ್ಲಿ ಅಳಿಸಿ ಹೋಗದ ಬಿಲ್ ನೀಡುವಂತೆ ಬೇಡಿಕೆಯನ್ನು ನೀಡಲಾಗಿತ್ತು. ಆದರೆ ಇದುವರೆಗೆ ಮೆಸ್ಕಾಂ ಈ ಬೇಡಿಕೆಯನ್ನು ಈಡೇರಿಸಿಲ್ಲ. ಕೇಂದ್ರ ಸರ್ಕಾರದ ಸಮಸ್ಯೆಗಳು ಇಮೇಲ್ ಗೆ ಬಿಲ್ ರವಾನಿಸುವಂತೆ, ಮೆಸ್ಕಾಂ ಅಗತ್ಯ ಕ್ರಮವನ್ನು ಕೈಗೊಳ್ಳಬೇಕು ಎಂದು ಬೇಡಿಕೆ ಇಟ್ಟರು.

ಕರೋಪಾಡಿ ಗ್ರಾಮದ ನೆಲ ಜಲ ಸಂರಕ್ಷಣೆ ಸಮಿತಿ ಅಧ್ಯಕ್ಷ ಪಾಲಿಗೆ ರಾಮಣ್ಣ ಶೆಟ್ಟಿ ಮಾತನಾಡಿ ಕೃಷಿ ಪಂಪ್ ಸೆಟ್ ಗಳನ್ನು ಕೃಷಿಕರ ಹೆಸರಿನಲ್ಲಿ ದುರುಪಯೋಗ ಪಡಿಸಿಕೊಳ್ಳಲಾಗುತ್ತಿದೆ. ೫, ೧೦ ಸೆಂಟ್ಸ್ ಜಾಗವನ್ನು ಹೊಂದಿರುವವರು ಭೂಪರಿವರ್ತನೆ ಮಾಡಿಕೊಂಡರೂ, ನೀರಾವರಿ ಪಂಪ್ಸೆಟ್ ಗಳ ಉಚಿತ ವಿದ್ಯುತ್ ಸಂಪರ್ಕ ಪಡೆದುಕೊಳ್ಳುತ್ತಿದ್ದಾರೆ. ಇದನ್ನು ತಕ್ಷಣ ಸ್ಥಗಿತ ಮಾಡಬೇಕು ಎಂದು ಆಗ್ರಹಿಸಿದರು.
ರೈತ ಸಂಘದ ಜಿಲ್ಲಾ ಅಧ್ಯಕ್ಷ ಶ್ರೀಧರ ಶೆಟ್ಟಿ ಬೈಲುಗುತ್ತು, ದೇವಿದಾಸ ಶೆಟ್ಟಿ ಪಾಲ್ತಾಜೆ, ವೀರಪ್ಪ ಗೌಡ ರಾಯರ ಬೆಟ್ಟು, ಮಂಜುನಾಥ್ ಭಟ್ ಇನ್ನಿತರರು ಪ್ರಶ್ನೆ ಕೇಳಿದರು.
ಮೆಸ್ಕಾಂ ಮಂಗಳೂರು ವೃತ್ತದ ಅಧೀಕ್ಷಕ ಎಂಜಿನಿಯರ್ ಕೃಷ್ಣರಾಜ್ ಸಮಸ್ಯೆಗಳಿಗೆ ಪರಿಹಾರ ಒದಗಿಸುವ ಭರವಸೆ ನೀಡಿದರು. ಬಂಟ್ವಾಳ ಮೆಸ್ಕಾಂ ಉಪವಿಭಾಗದ ಕಾರ್ಯನಿರ್ವಾಹಕ ಎಂಜಿನಿಯರ್ ವೆಂಕಟೇಶ್, ವಿಟ್ಲ ಮೆಸ್ಕಾಂ ಉಪವಿಭಾಗದ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಗೋವಿಂದರಾಜ್ ಸಭಿಕರಿಗೆ ಉತ್ತರಿಸಿದರು.ವಿಟ್ಲ ಉಪವಿಭಾಗದ ಸಹಾಯಕ ಇಂಜಿನಿಯರ್ ಶ್ರೀನಿವಾಸ ಭಟ್, ಯೋಗೀಶ್, ಸಹಾಯಕ ಲೆಕ್ಕಾಧಿಕಾರಿ ರೇವತಿ.ವಿ, ಜ್ಯೂನಿಯರ್ ಇಂಜಿನಿಯರ್ ಗಳಾದ ಆನಂದ್.ಎಂ, ದುರ್ಗೇಶ್, ಸತೀಶ್ ಎಂ, ಪ್ರಸಾದ್.ಕೆ ಉಪಸ್ಥಿತರಿದ್ದರು.






