ವಿಟ್ಲ: ಸಾಲೆತ್ತೂರು ಶಿವಗಿರಿ ಬೆಟ್ಟದ ಸದಾಶಿವ ದೇವಸ್ಥಾನದಲ್ಲಿ ಸಾಕಷ್ಟು ಜೀರ್ಣೋದ್ಧಾರ ಕಾರ್ಯಗಳು ಆಗಬೇಕಾಗಿದ್ದು, ಮುಂದಿನ ವರ್ಷದೊಳಗೆ ಬ್ರಹ್ಮಕಲಶ ನಡೆಸಲಾಗುವುದು ಎಂದು ಜೀರ್ಣೋದ್ಧಾರ ಸಮಿತಿಯ ಮಾಧವ ಮಾವೆ ಹೇಳಿದರು.
ಅವರು ಸದಾಶಿವ ದೇವಸ್ಥಾನದಲ್ಲಿಪತ್ರಿಕಾಗೋಷ್ಠಿ ನಡೆಸಿ ಈ ಕುರಿತು ಮಾಹಿತಿ ಒದಗಿಸಿದರು. ಸುಮಾರು ಹದಿನೆಂಟು ವರುಷಗಳ ಹಿಂದೆ ಬ್ರಹ್ಮಕಲಶ ನಡೆಸಲಾಗಿದೆ. ಮುಂದಿನ ತಿಂಗಳು ನಡೆಯುವ ದೇವಸ್ಥಾನದ ವರ್ಧಂತ್ಯುತ್ಸವದ ಸಂದರ್ಶನದಲ್ಲಿ ಮರದ ಕೆತ್ತನೆ ಶಿಲ್ಪಿ ಗೆ ವೀಳ್ಯ ನೀಡಲಾಗುವುದು ಎಂದರು.ದೇವಸ್ಥಾನದಲ್ಲಿ ರಾಜಾಂಗಣ, ಪಾಕಶಾಲೆ, ಭೋಜನ ಶಾಲೆ, ಶೌಚಾಲಯ ನಿರ್ಮಿಸಲಾಗಿದೆ, ಹೊರಾಂಗಣ ಸುತ್ತು ಪೌಳಿಯ ಕಾರ್ಯ ಅರ್ಧದಷ್ಟು ಆಗಿದೆ. ಆದರೆ ದೇವಸ್ಥಾನದ ಗರ್ಭಗುಡಿ, ನಮಸ್ಕಾರ ಮಂಟಪ, ಗಣಪತಿ ಗುಂಡಿಗಳನ್ನು ಶಿಲಾಮಯವಾಗಿ ಮಾಡಿದ್ದರೂ ಮಾಡು ಕಾಂಕ್ರೀಟ್ ಮಯವಾಗಿದೆ. ಪ್ರಶ್ನೆ ಚಿಂತನೆಯಲ್ಲಿ ಮೇಲ್ಚಾವಣಿಯನ್ನು ಮರದ ಮಾಡು ಮಾಡಿ ಹಂಚು ಹೊದಿಸಬೇಕು ಅಥವಾ ತಾಮ್ರದ ಹೊದಿಕೆ ಮಾಡಬೇಕು ಎಂದು ಕಂಡು ಬಂದಿದೆ. ಶಾಸ್ತಾರಕಟ್ಟೆಯನ್ನು ಪುನರ್ ನಿರ್ಮಾಣ ಮಾಡಬೇಕಿದೆ ಎಂದು ಅವರು ಹೇಳಿದರು.ಈಗ ವರ್ಧಂತ್ಯುತ್ಸವ ಮಾತ್ರ ನಡೆಯುತ್ತಿದ್ದು , ಮುಂದಿನ ದಿನಗಳಲ್ಲಿ ಜಾತ್ರೆ ನಡೆಸುವ ಯೋಜನೆ ಇದೆ. ವಾಸ್ತು ತಜ್ಞರ ಪ್ರಕಾರ ಸುಮಾರು ಒಂದೂವರೆ ಕೋಟಿ ರೂ. ವೆಚ್ಚ ತಗಲಬಹುದು ಎಂದು ಅವರು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಸದಾಶಿವ ಸೇವಾ ಟ್ರಸ್ಟ್ ಅಧ್ಯಕ್ಷ ಲಕ್ಷ್ಮಣ ಸಫಲ್ಯ, ಕೋಶಾಧಿಕಾರಿ ಮಂಜುನಾಥ ಭಂಡಾರಿ ಅಗರಿ,ಸದಾಶಿವ ಸೇವಾ ಟ್ರಸ್ಟ್ ಮತ್ತು ಜೀರ್ಣೋದ್ಧಾರ ಸಮಿತಿಯ ಪದಾಧಿಕಾರಿಗಳಾದ ಆನಂದ ರೈ ಪೆರ್ಲದಬೈಲು, ರಂಗನಾಥ ರೈ ಬೆಳಿಯೂರುಗುತ್ತು, ಶ್ರೀನಿವಾಸ ಆಚಾರ್ಯ, ದೇವಿ ಪ್ರಸಾದ್ ಶೆಟ್ಟಿ ಪಾಲ್ತಾಜೆಮೊದಲಾದವರು ಉಪಸ್ಥಿತರಿದ್ದರು.







