Breaking
19 Oct 2026, Mon

ಉಪ್ಪಿನಂಗಡಿಯಲ್ಲಿ ತಲ್ವಾರ್, ಬಿಯರ್ ಬಾಟಲಿ ಹಿಡಿದು ಎರಡು ಗುಂಪುಗಳ ಮಾರಾಮಾರಿ; ಇಬ್ಬರು ವಶಕ್ಕೆ

ಉಪ್ಪಿನಂಗಡಿ: ತಲ್ವಾರ್ ಹಾಗೂ ಬಿಯರ್ ಬಾಟಲಿ ಹಿಡಿದು ಎರಡು ಗುಂಪುಗಳ ನಡುವೆ ಮಾರಾಮಾರಿ ನಡೆದ ಘಟನೆ ಅಕ್ಟೋಬರ್ 18ರ ರಾತ್ರಿ ಉಪ್ಪಿನಂಗಡಿಯ ಕಾರ್ತಿಕ್ ಬಾರ್ನ ಹೊರಭಾಗದಲ್ಲಿ ನಡೆದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಇಳಂತಿಲದ ಮಂಜುನಾಥ್ ಹಾಗೂ ಕರವಲಿನ ವಿಶ್ವನಾಥ್ ಎಂಬುವವರನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಮತ್ತೊಬ್ಬ ಆರೋಪಿ ಮುನ್ನಾ ಪರಾರಿಯಾಗಿದ್ದಾನೆ ಎಂದು ತಿಳಿದುಬಂದಿದೆ.


ಮದ್ಯದ ಅಮಲಿನಲ್ಲಿದ್ದ ಗುಂಪು ಬಾರ್ನ ಹೊರಭಾಗದ ಸಾರ್ವಜನಿಕ ಸ್ಥಳದಲ್ಲಿ ಗಲಾಟೆ ನಡೆಸಿ ಭೀತಿ ಸೃಷ್ಟಿಸಿತ್ತು. ಈ ವೇಳೆ ಮಂಜುನಾಥ್ ತಲ್ವಾರ್ ಬೀಸುತ್ತಿದ್ದರೆ, ಮುನ್ನಾ ಕೈಯಲ್ಲಿ ಬಿಯರ್ ಬಾಟಲಿ ಹಿಡಿದಿದ್ದ ಎನ್ನಲಾಗಿದೆ.


ಘಟನೆಯ ಮಾಹಿತಿ ತಿಳಿದ ಕೂಡಲೇ ಸ್ಥಳಕ್ಕೆ ಧಾವಿಸಿದ ಉಪ್ಪಿನಂಗಡಿ ಪೊಲೀಸರು, ಮಂಜುನಾಥ್ನನ್ನು ವಶಕ್ಕೆ ಪಡೆದು ಆತನ ಬಳಿಯಿದ್ದ ತಲ್ವಾರ್ ಅನ್ನು ವಶಪಡಿಸಿಕೊಂಡಿದ್ದಾರೆ. ಪೊಲೀಸರನ್ನು ಕಂಡ ಮುನ್ನಾ ಸ್ಥಳದಿಂದ ಪರಾರಿಯಾಗಿದ್ದಾನೆ.
ವಿಚಾರಣೆ ವೇಳೆ, ಕುಡಿದ ಮತ್ತಿನಲ್ಲಿ ಮುನ್ನಾ ಮಂಜುನಾಥ್ನ ಮನೆಯವರನ್ನು ಅವಾಚ್ಯವಾಗಿ ನಿಂದಿಸಿದ ಹಿನ್ನೆಲೆಯಲ್ಲಿ ಇಬ್ಬರ ನಡುವೆ ಮಾತಿನ ಚಕಮಕಿ ನಡೆದು ಗಲಾಟೆ ಸಂಭವಿಸಿದೆ ಎಂದು ತಿಳಿದುಬಂದಿದೆ.


ಈ ಕುರಿತು ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಅಪರಾಧ ಸಂಖ್ಯೆ 135/2026ರಂತೆ ಭಾರತೀಯ ನ್ಯಾಯ ಸಂಹಿತೆ (BNS) 2023ರ ಕಲಂ 194, 296, 351(3) ಹಾಗೂ ಶಸ್ತ್ರಾಸ್ತ್ರ ಕಾಯ್ದೆ 1959ರ ಕಲಂ 25(1B)(b) ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ವಿಚಾರಣೆ ಬಳಿಕ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂದು ತಿಳಿದುಬಂದಿದೆ.

Leave a Reply

Your email address will not be published. Required fields are marked *