ವಿಟ್ಲ: ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದಲ್ಲಿ ಶ್ರೀ ಒಡಿಯೂರು ರಥೋತ್ಸವ ತುಳುನಾಡ ಜಾತ್ರೆ ಅಂಗವಾಗಿ ಫೆ.೬,೭ ರಂದು ನಡೆಯುವ ಶ್ರೀ ಗುರುದೇವ ಅಧ್ಯಾತ್ಮ ಕೇಂದ್ರ ಲೋಕಾರ್ಪಣೆ, ೨೫ನೇ ವರ್ಷದ ತುಳು ಸಾಹಿತ್ಯ ಸಮ್ಮೇಳನದ ಅಂಗವಾಗಿ ಮಂಗಳವಾರ ಹೊರೆಕಾಣಿಕೆ ಮೆರವಣಿಗೆ ನಡೆಯಿತು.
ಹೊರೆಕಾಣಿಕೆ ಮೆರವಣಿಗೆಯನ್ನು ಸ್ವಾಗತಿಸಿ, ಉಗ್ರಾಣ ಮುಹೂರ್ತ ನೆರವೇರಿಸಿ ಸಂದೇಶ ನೀಡಿದ ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಶ್ರೀ ಗುರುದೇವಾನಂದ ಸ್ವಾಮೀಜಿ ಹೊರೆಕಾಣಿಕೆ ಎಂಬುದು ಉತ್ಸವದ ಪ್ರಾರಂಭವಾಗಿದ್ದು, ಕೋಶ ತುಂಬಿದಾಗ ಉತ್ಸವ ಯಶಸ್ವಿಯಾಗುವುದು. ದೇಹ ಹಾಗೂ ದೇಶ ಎರಡಕ್ಕೂ ಕೋಶ ಎಂಬುದು ಪ್ರಾಮುಖ್ಯವಾಗಿದ್ದು, ಇತಿಮಿತಿಯಲ್ಲಿರಬೇಕು. ಕೋಶವಿಲ್ಲದಿದ್ದರೆ ದೇಶಕ್ಕೆ ಅಪಾಯ, ಕೋಶ ಸರಿಯಾಗಿ ತುಂಬದಿದ್ದರೆ ದೇಹಕ್ಕೆ ಅಪಾಯವಿದೆ. ಕೋಶವನ್ನು ತುಂಬಿಸುವಲ್ಲಿ ಎಲ್ಲರ ಪಾತ್ರ ದೊಡ್ಡದಿದ್ದು, ಎಲ್ಲ ಭಕ್ತರನ್ನು ಶ್ರೀ ಸಂಸ್ಥಾನ ಸದಾ ಸ್ಮರಿಸುತ್ತದೆ ಎಂದು ಹೇಳಿದರು.

ಮಂಗಳೂರು, ಪುತ್ತೂರು, ಸುಳ್ಯ, ಬೆಳ್ತಂಗಡಿ, ಮೂಲ್ಕಿ, ಕಡಬ, ಮೂಡಬಿದರೆ, ಕಾಸರಗೋಡು ಸೇರಿ ಜಿಲ್ಲೆಯ ವಿವಿಧ ಕಡೆಯಿಂದ ಹೊರೆಕಾಣಿಕೆ ವಾಹನಗಳ ಮೂಲಕ ಕ್ಷೇತ್ರಕ್ಕೆ ಆಗಮಿಸಿತು.ಸಾಧ್ವ ಮಾತಾನಂದಮಯೀ ದಿವ್ಯ ಸಾನಿಧ್ಯವಹಿಸಿದ್ದರು.
ಶ್ರೀ ಒಡಿಯೂರು ರಥೋತ್ಸವ ಸಮಿತಿಯ ಕೋಶಾಧಿಕಾರಿ ಎ. ಸುರೇಶ್ ರೈ, ಪ್ರಧಾನ ಕಾರ್ಯದರ್ಶಿ ಯಶವಂತ ವಿಟ್ಲ, ಕಾರ್ಯದರ್ಶಿ ಹರಿಣಾಕ್ಷಿ ಎಸ್. ಶೆಟ್ಟಿ, ಸ್ವಾಗತ ಸಮಿತಿ ಲಿಂಗಪ್ಪ ಗೌಡ ಪನೆಯಡ್ಕ, ಹಸಿರುವಾಣಿ ಹೊರೆಕಾಣಿಕೆ ಸಂಚಾಲಕ ದೇವಿಪ್ರಸಾದ್ ಶೆಟ್ಟಿ ಬೈಲುಕೊಳಂಬೆಗುತ್ತು, ಆರ್ಥಿಕ ಸಮಿತಿಯ ಸಂಚಾಲಕ ಶಶಿಧರ ಶೆಟ್ಟಿ ಜಮ್ಮದಮನೆ, ಮಾಹಿತಿ ಮತ್ತು ಸಮನ್ವಯ ಸಮಿತಿ ಸಂಚಾಲಕ ಗಣಪತಿ ಭಟ್ ಸೇರಾಜೆ, ಸ್ವಯಂ ಸೇವಕ ಸಂಚಾಲಕ ಪ್ರವೀಣ್ ಬೇಡಗುಡ್ಡೆ, ವೇದಿಕೆ ಮತ್ತು ಸಭಾ ಸಂಚಾಲಕ ಸಂತೋಷ್ ಭಂಡಾರಿ, ಒಡಿಯೂರು ಶ್ರೀ ಗ್ರಾಮ ವಿಕಾಸ ಯೋಜನೆಯ ಸಾರ್ವಜನಿಕ ಸಂಪರ್ಕಾಧಿಕಾರಿ ಮಾತೇಶ್ ಭಂಡಾರಿ, ಕ್ಷೇತ್ರದ ಕಾರ್ಯನಿರ್ವಾಹಕ ಪದ್ಮನಾಭ ಒಡಿಯೂರು ಮತ್ತಿತರರು ಉಪಸ್ಥಿತರಿದ್ದರು.




