Breaking
3 Aug 2026, Mon

ಪಾಣೆಮಂಗಳೂರಿನಲ್ಲಿ ಗಾಣಿಗರ ಸೇವಾ ಸಂಘದ ಕಾರ್ಯಕ್ರಮ: ನವೀಕೃತ ಸುಮಂಗಲಾ ಕಲ್ಯಾಣ ಮಂಟಪ ಲೋಕಾರ್ಪಣೆ, ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನ ವಿತರಣೆ

ಬಂಟ್ವಾಳ: ಬಂಟ್ವಾಳ ತಾಲ್ಲೂಕಿನ ಗಾಣಿಗರ ಸೇವಾ ಸಂಘದ ವತಿಯಿಂದ ಪಾಣೆಮಂಗಳೂರಿನ ಸುಮಂಗಲಾ ಸಭಾಂಗಣದಲ್ಲಿ ಭಾನುವಾರ ವಿದ್ಯಾರ್ಥಿ ಪ್ರೋತ್ಸಾಹಧನ ವಿತರಣೆ, ಸಾಧಕರಿಗೆ ಸನ್ಮಾನ ಹಾಗೂ ನವೀಕೃತ ಸುಮಂಗಲಾ ಕಲ್ಯಾಣ ಮಂಟಪ ಲೋಕಾರ್ಪಣೆ ಕಾರ್ಯಕ್ರಮ ವಿಜೃಂಭಣೆಯಿಂದ ನಡೆಯಿತು.


ಕಾರ್ಯಕ್ರಮವನ್ನು ರಾಜ್ಯ ಗಾಣಿಗ ಅಭಿವೃದ್ಧಿ ನಿಗಮದ ಅಧ್ಯಕ್ಷ ಹಾಗೂ ಮಾಜಿ ಮೇಯರ್ ಅನಂತ್ ಮೈಸೂರು ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ರಾಜ್ಯದಲ್ಲಿ ಸುಮಾರು 35 ಲಕ್ಷ ಮಂದಿ ಗಾಣಿಗ ಸಮುದಾಯದವರಿದ್ದರೂ ವಿವಿಧ ಪಂಗಡಗಳಾಗಿ ವಿಭಜನೆಯಾಗಿರುವುದರಿಂದ ಶೈಕ್ಷಣಿಕ ಹಾಗೂ ರಾಜಕೀಯವಾಗಿ ಹಿಂದುಳಿದಿರುವುದು ವಿಷಾದನೀಯ ಎಂದರು. ರಾಜ್ಯದಲ್ಲಿ ಮೊದಲ ಬಾರಿಗೆ ಗಾಣಿಗ ಅಭಿವೃದ್ಧಿ ನಿಗಮ ಸ್ಥಾಪನೆಯಾಗಿದ್ದು, ಸರ್ಕಾರದಿಂದ ₹500 ಕೋಟಿ ಅನುದಾನ ದೊರೆತರೆ ಸಮುದಾಯದ ಶಿಕ್ಷಣ ಮತ್ತು ಸ್ವಉದ್ಯೋಗ ಚಟುವಟಿಕೆಗಳಿಗೆ ಹೆಚ್ಚಿನ ಉತ್ತೇಜನ ನೀಡಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗಾಣಿಗರ ಸೇವಾ ಸಂಘದ ಅಧ್ಯಕ್ಷ ಕೃಷ್ಣಪ್ಪ ಗಾಣಿಗ ವಹಿಸಿದ್ದರು.


ಮುಂಬೈ ಗಾಣಿಗ ಸಂಘದ ಅಧ್ಯಕ್ಷ ಶ್ರೀನಿವಾಸ್ ಪಿ. ಸಪಲ್ಯ ನವೀಕೃತ ಸುಮಂಗಲಾ ಕಲ್ಯಾಣ ಮಂಟಪವನ್ನು ಲೋಕಾರ್ಪಣೆಗೊಳಿಸಿ ಮಾತನಾಡಿ, ರಾಜಕೀಯ ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು ಸಮುದಾಯ ಸಂಘಟಿತರಾದಾಗ ಮಾತ್ರ ಸಮಾಜ ಮತ್ತಷ್ಟು ಬಲಿಷ್ಠವಾಗಲು ಸಾಧ್ಯ ಎಂದು ಅಭಿಪ್ರಾಯಪಟ್ಟರು.
ಮಾಜಿ ಸಚಿವ ಬಿ. ರಮಾನಾಥ ರೈ ಸ್ಮರಣ ಸಂಚಿಕೆಯನ್ನು ಬಿಡುಗಡೆಗೊಳಿಸಿ, ಸಮಾಜದ ಇತಿಹಾಸವನ್ನು ಅರಿತು ಮುಂದಿನ ಪೀಳಿಗೆಗೆ ಪರಿಚಯಿಸುವ ಜೊತೆಗೆ ಗಾಣಿಗ ಸಮುದಾಯ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತವಾಗಬೇಕು ಎಂದು ಕರೆ ನೀಡಿದರು.


ಈ ಸಂದರ್ಭದಲ್ಲಿ ನಾದಸ್ವರ ವಾದಕರಾದ ಧನಂಜಯ ಶೇರಿಗಾರ್ (ಶಿಬರೂರು) ಹಾಗೂ ಮನೋಜ್ ಗಾಣಿಗ (ಕಟೀಲು) ಅವರನ್ನು ಸನ್ಮಾನಿಸಲಾಯಿತು. ಸಾಧಕ ವಿದ್ಯಾರ್ಥಿಗಳು ಹಾಗೂ ಕೊಂಬು ವಾದಕರನ್ನು ಅಭಿನಂದಿಸಲಾಯಿತು.


ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಮತ್ತು ವಿಧಾನಪರಿಷತ್ ಸದಸ್ಯ ಕಿಶೋರ್ ಕುಮಾರ್ ಬೊಟ್ಯಾಡಿ ಮಾತನಾಡಿ, ಗಾಣಿಗ ಸಮಾಜವು ದೇಶಕ್ಕೆ ವಿಶ್ವಮಟ್ಟದ ನಾಯಕತ್ವ ನೀಡಿದ ಪ್ರಧಾನಿ ನರೇಂದ್ರ ಮೋದಿ ಅವರನ್ನು ಕೊಡುಗೆಯಾಗಿ ನೀಡಿರುವುದು ಸಮುದಾಯದ ಹೆಮ್ಮೆ ಎಂದರು.


ಕಾರ್ಯಕ್ರಮದಲ್ಲಿ ಅಖಿಲ ಕರ್ನಾಟಕ ಗಾಣಿಗ ಸಂಘದ ಅಧ್ಯಕ್ಷ ರಾಜಶೇಖರ್ ಗಾಣಿಗ, ಜಿಲ್ಲಾ ಸಂಘದ ಅಧ್ಯಕ್ಷ ವಿಶ್ವಾಸ್ ಕುಮಾರ್ ದಾಸ್, ಜಿಲ್ಲಾ ಬಿಜೆಪಿ ವಕ್ತಾರ ಮಾಧವ ಎಸ್. ಮಾವೆ, ಉದ್ಯಮಿಗಳಾದ ವಸಂತ ಜಿ. ಸಪಲ್ಯ (ಕುಂಜಾರು), ಜನಾರ್ದನ ಅರ್ಕುಳ, ಸುಮಂಗಲಾ ಕ್ರೆಡಿಟ್ ಸೊಸೈಟಿ ಅಧ್ಯಕ್ಷ ನಾಗೇಶ ಕಲ್ಲಡ್ಕ, ಕೇಶವ ಅತ್ತಾವರ, ವೆಂಕಟೇಶ್ ಅತ್ತಾವರ, ಸಚಿನ್ ಮೆಲ್ಕಾರ್, ಸಂಘದ ಪದಾಧಿಕಾರಿಗಳಾದ ನರ್ಸಪ್ಪ ಅಮೀನ್, ವೇದವ ಗಾಣಿಗ, ಭುವನೇಶ್ ಮೊಗರ್ನಾಡು, ಆಶಾ ವೇದವ ಗಾಣಿಗ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.


ಸಂಘದ ಕಾರ್ಯದರ್ಶಿ ಬಾಲಕೃಷ್ಣ ಸೆರ್ಕಳ ಸ್ವಾಗತಿಸಿದರು. ವಸಂತ ವಂದಿಸಿದರು. ದೀಪಕ್ ಅಡ್ಯಾರು ಕಾರ್ಯಕ್ರಮ ನಿರೂಪಿಸಿದರು.
ಸಭಾ ಕಾರ್ಯಕ್ರಮದ ಬಳಿಕ ನರಿಕೊಂಬು ಅಬ್ಬೆಯಮಜಲು ಶ್ರೀ ಮಹಮ್ಮಾಯಿ ಯಕ್ಷಗಾನ ಕಲಾ ಕೇಂದ್ರದ ಬಾಲ ಕಲಾವಿದರಿಂದ ಯಕ್ಷಗಾನ ಪ್ರದರ್ಶನ ನಡೆಯಿತು.

Leave a Reply

Your email address will not be published. Required fields are marked *