Breaking
29 Jul 2026, Wed

ಬ್ರಹ್ಮಾವರ: ಅಕ್ರಮವಾಗಿ ಸಾಗಿಸುತ್ತಿದ್ದ ಅನ್ನಭಾಗ್ಯ ಅಕ್ಕಿ ವಶ

ಬ್ರಹ್ಮಾವರ: ಸರ್ಕಾರದ ಅನ್ನಭಾಗ್ಯ ಯೋಜನೆಗೆ ಸೇರಿದ ಅಕ್ಕಿಯನ್ನು ಅಕ್ರಮವಾಗಿ ಸಾಗಿಸುತ್ತಿದ್ದ ಲಾರಿಯನ್ನು ಆಹಾರ ಇಲಾಖೆ ಅಧಿಕಾರಿಗಳು ಹಾಗೂ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ವಶಪಡಿಸಿಕೊಂಡಿದ್ದಾರೆ.

ಕುಮಟಾದ ನಾಡಾ ಮಸ್ಕೇರಿಯ ಮಾಲೀಕ ನಾಗರಾಜ ನಾಯ್ಕ್ ಅವರಿಗೆ ಸೇರಿದ ಶ್ರೀ ಗಣೇಶ್ ರೈಸ್ ಇಂಡಸ್ಟ್ರೀಸ್‌ನಿಂದ ಅಕ್ಕಿಯನ್ನು ಲಾರಿಗೆ ತುಂಬಿಸಿ, ಲಾರಿ ಮಾಲೀಕ ಗಿರೀಶ್ ನಾಯ್ಕ್ ಅವರ ಸೂಚನೆಯಂತೆ ಚಾಲಕ ಕೆ. ನರಸಿಂಹ ಅಕ್ಕಿಯನ್ನು ಕೇರಳದ ಕಾಸರಗೋಡಿನ ಶಾಜಿ ಟ್ರೇಡಿಂಗ್ ಕಂಪನಿಗೆ ಅಕ್ರಮವಾಗಿ ಸಾಗಿಸಲಾಗುತ್ತಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಬ್ರಹ್ಮಾವರ ಆಹಾರ ನಿರೀಕ್ಷಕ ವಸಂತ್ ಕುಮಾರ್ ಅವರಿಗೆ ದೊರೆತ ಖಚಿತ ಮಾಹಿತಿಯ ಮೇರೆಗೆ ಕೋಟ ಪೊಲೀಸ್ ಠಾಣೆಯ ಉಪನಿರೀಕ್ಷಕ ಪ್ರವೀಣ್ ಕುಮಾರ್ ಹಾಗೂ ಸಿಬ್ಬಂದಿಯ ಸಹಕಾರದೊಂದಿಗೆ ಮಣೂರು ಗ್ರಾಮದ ಮಹಾಲಕ್ಷ್ಮಿ ಹೋಟೆಲ್ ಮುಂಭಾಗದಲ್ಲಿ ಕಾರ್ಯಾಚರಣೆ ನಡೆಸಲಾಯಿತು.

ಈ ವೇಳೆ ಲಾರಿಯನ್ನು ತಡೆದು ಪರಿಶೀಲಿಸಿದಾಗ 320 ಪ್ಲಾಸ್ಟಿಕ್ ಚೀಲಗಳಲ್ಲಿ ಸಾಗಿಸಲಾಗುತ್ತಿದ್ದ 160 ಕ್ವಿಂಟಲ್ ಅನ್ನಭಾಗ್ಯ ಅಕ್ಕಿ ಪತ್ತೆಯಾಗಿದೆ. ಅಕ್ಕಿಯ ಮೌಲ್ಯ ಸುಮಾರು ₹3.84 ಲಕ್ಷ ಎಂದು ಅಂದಾಜಿಸಲಾಗಿದೆ. ಜೊತೆಗೆ ₹3.50 ಲಕ್ಷ ಮೌಲ್ಯದ ಲಾರಿಯನ್ನೂ ವಶಪಡಿಸಿಕೊಳ್ಳಲಾಗಿದೆ.

ಅಕ್ಕಿ ಹಾಗೂ ಲಾರಿ ಸೇರಿದಂತೆ ಜಪ್ತಿಯಾದ ಸೊತ್ತಿನ ಒಟ್ಟು ಮೌಲ್ಯ ₹7.34 ಲಕ್ಷ ಎಂದು ತಿಳಿಸಲಾಗಿದೆ. ಈ ಸಂಬಂಧ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.

Leave a Reply

Your email address will not be published. Required fields are marked *