ಕಾಸರಗೋಡು: ಕನ್ನಡ ಸಾಹಿತ್ಯ ಸಂಘಟಕ, ಹಿರಿಯ ಪತ್ರಕರ್ತ ಹಾಗೂ ಶಿಕ್ಷಕರಾದ ಜಯಾನಂದ ಪೆರಾಜೆ ಅವರಿಗೆ 2026ನೇ ಸಾಲಿನ ರಾಷ್ಟ್ರಕವಿ ಮಂಜೇಶ್ವರ ಗೋವಿಂದ ಪೈ ರಾಷ್ಟ್ರ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲು ಆಯ್ಕೆ ಮಾಡಲಾಗಿದೆ.

ಈ ಕುರಿತು ಕರ್ನಾಟಕ ಗಡಿನಾಡು ಕನ್ನಡ ಸಮ್ಮೇಳನ ಸಮಿತಿ ಅಧ್ಯಕ್ಷ ಡಾ. ಕೆ.ಎನ್. ವೆಂಕಟರಮಣ ಹೊಳ್ಳ ಹಾಗೂ ಕಾಸರಗೋಡು ಕನ್ನಡ ಭವನದ ಸ್ಥಾಪಕ ಅಧ್ಯಕ್ಷ ಡಾ. ವಾಮನರಾವ್ ಬೇಕಲ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಜಯಾನಂದ ಪೆರಾಜೆ ಅವರು ಅಖಿಲ ಭಾರತೀಯ ಸಾಹಿತ್ಯ ಪರಿಷತ್, ಕನ್ನಡ ಸಾಹಿತ್ಯ ಪರಿಷತ್, ಕನ್ನಡ ಚುಟುಕು ಸಾಹಿತ್ಯ ಪರಿಷತ್, ಬರಹಗಾರರ ಸಂಘ ಹಾಗೂ ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ಸೇರಿದಂತೆ ಹಲವು ಕನ್ನಡಪರ ಸಂಘಟನೆಗಳಲ್ಲಿ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದು, ಕನ್ನಡದ ಸಂಘಟನೆ ಮತ್ತು ಸಾಹಿತ್ಯ ಚಟುವಟಿಕೆಗಳಲ್ಲಿ ನಿರಂತರವಾಗಿ ತೊಡಗಿಸಿಕೊಂಡಿದ್ದಾರೆ.

ಕಳೆದ 40 ವರ್ಷಗಳಿಂದ ಕನ್ನಡ ಭಾಷಾ ಶಿಕ್ಷಕ ಹಾಗೂ ಉಪನ್ಯಾಸಕರಾಗಿ ಸೇವೆ ಸಲ್ಲಿಸಿರುವ ಅವರು, ಪ್ರಮುಖ ಪತ್ರಿಕೆಗಳಲ್ಲಿ ಪತ್ರಕರ್ತರಾಗಿಯೂ ಗುರುತಿಸಿಕೊಂಡಿದ್ದಾರೆ. ರಾಷ್ಟ್ರಮಟ್ಟದ ಕವಿಗೋಷ್ಠಿಗಳಲ್ಲಿ ಭಾಗವಹಿಸಿ ಹಲವು ಚುಟುಕು ಕವನ ಸಂಕಲನಗಳನ್ನು ಪ್ರಕಟಿಸಿದ್ದಾರೆ. ಕಲಾವಿದ, ನಿರ್ದೇಶಕ, ಕ್ರಿಯಾಶೀಲ ತರಬೇತುದಾರ ಹಾಗೂ ಸಂಪನ್ಮೂಲ ವ್ಯಕ್ತಿಯಾಗಿ ವಿವಿಧ ಕ್ಷೇತ್ರಗಳಲ್ಲಿ ತಮ್ಮ ಪ್ರತಿಭೆಯನ್ನು ಮೆರೆದಿದ್ದಾರೆ.

ಜೇಸಿ, ಎಸ್‌ಸಿಐ, ಲಯನ್ಸ್ ಸೇರಿದಂತೆ ಹಲವು ಸಾಮಾಜಿಕ ಸಂಘಟನೆಗಳ ಮೂಲಕ ರಾಷ್ಟ್ರ ಮತ್ತು ಸಮಾಜಮುಖಿ ಸೇವೆಯಲ್ಲಿ ತೊಡಗಿಸಿಕೊಂಡಿರುವ ಅವರ ಬಹುಮುಖಿ ಸೇವೆಯನ್ನು ಪರಿಗಣಿಸಿ ಈ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ಆಯ್ಕೆ ಸಮಿತಿ ತಿಳಿಸಿದೆ.

ಜುಲೈ 26ರಂದು ಕಾಸರಗೋಡಿನ ಕನ್ನಡ ಭವನದಲ್ಲಿ ನಡೆಯಲಿರುವ ರಜತ ಸಂಭ್ರಮ ಸಮಾರೋಪ ಹಾಗೂ ಕರ್ನಾಟಕ ಗಡಿನಾಡು ಕನ್ನಡ ಸಮ್ಮೇಳನದ ಸಂದರ್ಭದಲ್ಲಿ ಈ ಪ್ರತಿಷ್ಠಿತ ಪ್ರಶಸ್ತಿಯನ್ನು ಪ್ರದಾನ ಮಾಡಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.


