Breaking
7 Sep 2026, Mon

ಪತ್ನಿ-ಇಬ್ಬರು ಮಕ್ಕಳನ್ನು ಕೊಂದು ವ್ಯಕ್ತಿ ಆತ್ಮಹತ್ಯೆ: ಹುಣಸೂರಿನಲ್ಲಿ ಬೆಚ್ಚಿಬೀಳಿಸಿದ ಕುಟುಂಬ ದುರಂತ

ಹುಣಸೂರು: ಮೈಸೂರು ಜಿಲ್ಲೆಯ ಹುಣಸೂರಿನ ನ್ಯೂ ಮಾರುತಿ ಬಡಾವಣೆಯಲ್ಲಿ ಮನಕಲಕುವ ಕುಟುಂಬ ದುರಂತ ಸಂಭವಿಸಿದ್ದು, ವ್ಯಕ್ತಿಯೊಬ್ಬರು ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಹತ್ಯೆಗೈದು ಬಳಿಕ ತಾನೂ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಂಗಳವಾರ ಬೆಳಕಿಗೆ ಬಂದಿದೆ.


ಮೃತ ವ್ಯಕ್ತಿಯನ್ನು ಹರೀಶ್ ಅಲಿಯಾಸ್ ಸ್ಯಾಡೂ ಹರೀಶ್ (49) ಎಂದು ಗುರುತಿಸಲಾಗಿದೆ. ಇವರು ತಮ್ಮ ಪತ್ನಿ ನಿಶ್ಚಿತಾ (36) ಹಾಗೂ ಮಕ್ಕಳಾದ ನೆಕ್ಸಾ (13) ಮತ್ತು ರಕ್ಷಾ (6) ಅವರ ಬಾಯಿಗೆ ಪ್ಲಾಸ್ಟರ್ ಅಂಟಿಸಿ ಉಸಿರುಗಟ್ಟಿಸಿ ಹತ್ಯೆಗೈದಿದ್ದಾರೆ ಎನ್ನಲಾಗಿದೆ. ಬಳಿಕ ಮನೆಯ ಮೇಲಿನ ಕೊಠಡಿಗೆ ತೆರಳಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.


ಹರೀಶ್ ಅವರು ಖಾಸಗಿ ಫೈನಾನ್ಸ್ ಸಂಸ್ಥೆಗಳ ಮೂಲಕ ವಾಹನ ಸಾಲ ವ್ಯವಸ್ಥೆ ಮಾಡಿಕೊಡುವ ಕೆಲಸ ಮಾಡುತ್ತಿದ್ದರು ಎಂದು ತಿಳಿದುಬಂದಿದೆ.


ಬೆಳಗ್ಗೆ ಮನೆಯವರು ಯಾರೂ ಹೊರಗೆ ಕಾಣಿಸದ ಹಿನ್ನೆಲೆಯಲ್ಲಿ ಮನೆಗೆ ಬಂದಿದ್ದ ಡೆಲಿವರಿ ಸಿಬ್ಬಂದಿ ಹಲವು ಬಾರಿ ಕರೆದರೂ ಪ್ರತಿಕ್ರಿಯೆ ಸಿಗಲಿಲ್ಲ. ಅನುಮಾನಗೊಂಡ ಅವರು ನೆರೆಹೊರೆಯವರಿಗೆ ಮಾಹಿತಿ ನೀಡಿದ್ದು, ಕಿಟಕಿಯಿಂದ ಒಳಗೆ ನೋಡಿದಾಗ ನಾಲ್ವರೂ ಮೃತಪಟ್ಟಿರುವುದು ಕಂಡುಬಂದಿದೆ.


ಮಾಹಿತಿ ತಿಳಿಯುತ್ತಿದ್ದಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ, ಡಿವೈಎಸ್ಪಿ ರವಿ ಹಾಗೂ ಇನ್ಸ್ಪೆಕ್ಟರ್ ಶಿವಮಾದಯ್ಯ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.


ಘಟನೆಗೆ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.

Leave a Reply

Your email address will not be published. Required fields are marked *