ಬಂಟ್ವಾಳ: ಸಜೀಪ ಮೂಡದ ಸುಭಾಷ್ ನಗರ ಶ್ರೀ ಶಾರದಾ ಪೂಜಾ ಸಮಿತಿ ಹಾಗೂ ಸುಭಾಷ್ ಯುವಕ ಮಂಡಲದ ಆಶ್ರಯದಲ್ಲಿ ಶಾರದಾ ಪೂಜೆ ಮಹೋತ್ಸವದ ಶತಮಾನೋತ್ಸವದ ಅಂಗವಾಗಿ ಅಕ್ಟೋಬರ್ 17ರಿಂದ 22ರವರೆಗೆ ಆರು ದಿನಗಳ ಕಾಲ ವಿಜೃಂಭಣೆಯಿಂದ ನಡೆಯಲಿರುವ ಸಜೀಪ ದಸರಾ–2026 ಮಹೋತ್ಸವದ ಪೂರ್ವಭಾವಿ ಸಿದ್ಧತಾ ಸಭೆ ಜುಲೈ 19ರ ಭಾನುವಾರ ನಡೆಯಿತು.

ಶತಮಾನೋತ್ಸವ ಸಮಿತಿ ಅಧ್ಯಕ್ಷ ದೇವಿ ಪ್ರಸಾದ್ ಪೂಂಜ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಸಜೀಪ ಮಾಗಣೆ ತಂತ್ರಿ ಎಂ. ಸುಬ್ರಹ್ಮಣ್ಯ ಭಟ್, ಯುವಕ ಮಂಡಲದ ಅಧ್ಯಕ್ಷ ಎಸ್. ಶ್ರೀಕಾಂತ ಶೆಟ್ಟಿ, ಶತಮಾನೋತ್ಸವ ಸಮಿತಿ ದುಬೈ ಸಂಚಾಲಕ ರೊನಾಲ್ಡ್ ಮಾರ್ಟಿಸ್, ಈಶ್ವರ ಮಂಗಳ ಸದಾಶಿವ ದೇವಸ್ಥಾನ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಗಿರೀಶ್ ಕುಮಾರ್ ಪೆರ್ವ, ಮಹಿಳಾ ಸಮಿತಿ ಅಧ್ಯಕ್ಷೆ ಪುಷ್ಪ ರಮೇಶ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಸಭೆಯಲ್ಲಿ ಶತಮಾನೋತ್ಸವದ ಅಂಗವಾಗಿ ಆರು ದಿನಗಳ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು, ಅನ್ನದಾನ, ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ಗಣ್ಯರ ಸನ್ಮಾನ ಮತ್ತು ಪ್ರತಿದಿನ ಭಜನಾ ಕಾರ್ಯಕ್ರಮಗಳನ್ನು ಆಯೋಜಿಸುವ ಕುರಿತು ರೂಪುರೇಷೆಗಳನ್ನು ಸಿದ್ಧಪಡಿಸಲಾಯಿತು.



