Breaking
22 Mar 2026, Sun

ಪುಣಚ: ದೇವಿ ನೂತನ ಶಿಶು ಮಂದಿರದ ಉದ್ಘಾಟನೆ, ಶಾಲಾ ವಾರ್ಷಿಕೋತ್ಸವ

ವಿಟ್ಲ: ಪುಣಚ ದೇವಿ ನಗರ ಶ್ರೀ ದೇವಿ ವಿದ್ಯಾಕೇಂದ್ರದ ಆಶ್ರಯದಲ್ಲಿ ನಿರ್ಮಾಣಗೊಂಡ ಶ್ರೀ ದೇವಿ ನೂತನ ಶಿಶು ಮಂದಿರದ ಉದ್ಘಾಟನೆ ಹಾಗೂ ವಿದ್ಯಾಕೇಂದ್ರದ ವಾರ್ಷಿಕೋತ್ಸವ ನಡೆಯಿತು.

ಶಿಶು ಮಂದಿರ ಉದ್ಘಾಟಿಸಿದ ಡಾ. ಕಲ್ಲಡ್ಕ ಪ್ರಭಾಕರ ಭಟ್ ಮಾತನಾಡಿ, ಮೆಕಾಲೆ, ಮಹಮ್ಮದೀಯ, ಮಾರ್ಕ್ಸ್ ಶಿಕ್ಷಣ ಪದ್ಧತಿ ಮೂಲಕ ರಾಷ್ಟ್ರೀಯತೆ ಗೆ ಧಕ್ಕೆಯಾಗಿದೆ. ಆಂಗ್ಲ ಮಾಧ್ಯಮ ಶಿಕ್ಷಣ ನಮ್ಮತನವನ್ನು ಕಸಿದುಕೊಂಡಿದೆ. ಮಕ್ಕಳನ್ನು ಬೆಳೆಸುವ ಹೃದ್ಯತೆ ಮಾಯವಾಗಿದೆ. ರಾಷ್ಟ್ರ ಪ್ರೇಮ ಪೂರಿತ ಶಿಕ್ಷಣ ಇಂದಿನ ತೀರಾ ಅವಶ್ಯಕತೆಯಾಗಿದೆ. ದೇಶೀಯತೆ, ಧರ್ಮ, ಸಂಸ್ಕೃತಿ, ಜೀವನ ಮೌಲ್ಯಗಳು ಇರದ ಶಿಕ್ಷಣದಿಂದ ವಿದ್ಯಾರ್ಥಿಗಳು ನಲುಗಿ ಹೋಗಿದ್ದಾರೆ. ಜನ್ಮಭೂಮಿ, ಕರ್ಮಭೂಮಿ, ದೇವಭೂಮಿಗೆ ಸಂಬಂಧವಿರದ ಶಿಕ್ಷಣದಿಂದ ದೇಶ ಸಮೃದ್ಧತೆ ಪಡೆಯಲು ಅಸಾಧ್ಯ. ಸಂಸ್ಕಾರ ಕಿಡಿ ಹಚ್ಚುವ ಕಾರ್ಯ ಶಿಕ್ಷಣದಲ್ಲಿರಬೇಕು ಎಂದು ತಿಳಿಸಿದರು.

ಅತಿಥಿಯಾಗಿ ಭಾಗವಹಿಸಿದ ಪುತ್ತೂರು ನಗರ ಸಭೆ ಮಾಜಿ ಉಪಾಧ್ಯಕ್ಷೆ ವಿದ್ಯಾ ಗೌರಿ ಮಾತನಾಡಿ ಬುದ್ಧಿಶಕ್ತಿ, ಸಾಮಾಜಿಕ ಕೌಶಲ್ಯಗಳು, ವರ್ತನೆಗೆ ಪೂರಕವಾಗುವ ಶಿಕ್ಷಣ ಸಂಸ್ಥೆಗಳಲ್ಲಿ ಬೆಳೆದು ಮಕ್ಕಳು ದೇಶದ ಆಸ್ತಿಯಾಗುತ್ತಾರೆ. ದೇಶದ ಹಿತ, ಕಾನೂನು ಪಾಲಿಸುವ ಪ್ರಜೆಗಳೂ ಸಹ ದೇಶಪ್ರೇಮಿಗಳು ಎಂದರು .

ಶ್ರೀರಾಮ ಭಟ್ ನೆಡ್ಲೆ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.ವಿಟ್ಲ ಗ್ರಾಮೀಣ ಸಹಕಾರಿ ಬ್ಯಾಂಕ್ ನಿಯಮಿತದ ಹೆಚ್. ಜಗನ್ನಾಥ ಸಾಲ್ಯಾನ್, ಪುತ್ತೂರು ಮಾಸ್ಟರ್ ಪ್ಲಾನರಿ ಸಂಸ್ಥೆಯ ಮಾಲೀಕ ಅಕ್ಷಯ್, ಗೋಪಾಲ ಕೃಷ್ಣ ನಾಯಕ್ ನಟ್ಟಿ, ಶಾಲಾ ಸಂಚಾಲಕ ರವೀಶ್ ಪೊಸವಳಿಕೆ ಭಾಗವಹಿಸಿದ್ದರು.

ಆಡಳಿತ ಮಂಡಳಿ ಅಧ್ಯಕ್ಷ ಜಯಶ್ಯಾಂ ನೀರ್ಕಜೆ ಸ್ವಾಗತಿಸಿದರು.ಪ್ರೌಢಶಾಲಾ ಮುಖ್ಯ ಶಿಕ್ಷಕಿ ರಜನಿ ಶಾಲಾ ವರದಿ ವಾಚಿಸಿದರು.ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕ ಲೋಕೇಶ್ ವಂದಿಸಿದರು.ಶಿಕ್ಷಕ ವಿನೋದ್ ಕುಮಾರ್ ಅಡ್ಕಸ್ಥಳ ಕಾರ್ಯಕ್ರಮ ನಿರೂಪಿಸಿದರು. ಪ್ರೌಢಶಾಲಾ ಸಹ ಶಿಕ್ಷಕಿ ಶೀಲ ಶ್ರೀ, ಪ್ರಾಥಮಿಕ ಶಾಲಾ ಸಹ ಶಿಕ್ಷಕ ರೋಹಿತ್, ದೈಹಿಕ ಶಿಕ್ಷಕ ದಿನೇಶ್ ಸಹಕರಿಸಿದರು.

ಕ್ರೀಡಾ, ಶೈಕ್ಷಣಿಕ ಸಾಧಕ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು. ವಿದ್ಯಾಕೇಂದ್ರದ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಪ್ರದರ್ಶನಗೊಂಡಿತು.

Leave a Reply

Your email address will not be published. Required fields are marked *