Breaking
22 Mar 2026, Sun

ಬಲಹೀನವಾಗಿದೆ ಕಾರಿಂಜ ಕ್ಷೇತ್ರ ವಿದ್ಯುತ್ ಕಂಬಗಳು: ಇತಿಹಾಸ ಪ್ರಸಿದ್ಧ ಕಾರಿಂಜ ಕ್ಷೇತ್ರದ ವಿದ್ಯುತ್ ಕಂಬಗಳು ದುಸ್ಥಿತಿಯಲ್ಲಿ

ಬಂಟ್ವಾಳ: ತುಕ್ಕು ಹಿಡಿದಿರುವ ಕಬ್ಬಿಣದ ವಿದ್ಯುತ್ ಕಂಬಗಳು ಒಂದೆಡೆಯಾದರೆ, ವಾಲಿದ ವಿದ್ಯುತ್ ಕಂಬಕ್ಕೆ ಆಸರೆಯಾಗಿ ಇನ್ನೊಂದು ಕಂಬವಿದ್ದು ಆ ಕಂಬವೂ ಈಗ ಬೀಳುವ ಸ್ಥಿತಿಯಲ್ಲಿದೆ. ಮರದ ಬೇರು ಹೋಗಿ ಸವೆಯುತ್ತಿರುವ ವಿದ್ಯುತ್ ಕಂಬಗಳು, ಲಾಕ್ ಹಾಕಿ ಜೋಡಿಸಿರುವ ವಿದ್ಯುತ್ ಕಂಬಗಳು, ಕಂಬದಿಂದ ಕಂಬಕ್ಕೆ ಇರುವ ವಿದ್ಯುತ್ ತಂತಿಯನ್ನು ಅಲ್ಲಲ್ಲಿ ಜೋಡಿಸಿರುವುದು, ಇದು ಇತಿಹಾಸ ಪ್ರಸಿದ್ಧ ಕ್ಷೇತ್ರವಾದ ಕಾರಿಂಜ ದೇವಸ್ಥಾನದ ಬೆಟ್ಟಹತ್ತುವಾಗ ಸಿಗುವ ಸಾಲು ಸಾಲು ವಿದ್ಯುತ್ ಕಂಬಗಳ ದುಸ್ಥಿತಿ.

ಪುರಾತನ ಕ್ಷೇತ್ರವಾದ ಮಹತೋಭಾರ ಶ್ರೀ ಕಾರಿಂಜೇಶ್ವರ ದೇವಸ್ಥಾನಕ್ಕೆ ಕಾಲು ನಡಿಗೆಯಲ್ಲಿ ತೆರಳುವಾಗ ಸಿಗುವ ದಾರಿದೀಪ ಮತ್ತು ವಿದ್ಯುತ್ ಕಂಬಗಳ ಸ್ಥಿತಿಯಾಗಿದೆ. ಶ್ರೀ ಕಾರಿಂಜ ಕ್ಷೇತ್ರ ಪ್ರಸಿದ್ಧಿ ಪಡೆದ ಕ್ಷೇತ್ರವಾಗಿದ್ದರೂ, ಸುಮಾರು ೬೦ ವರ್ಷಗಳ ಹಿಂದೆ ವಿದ್ಯುತ್ ಸಂಪರ್ಕದ ದಾರಿದೀಪದ ವ್ಯವಸ್ಥೆಯಾಗಿದ್ದು, ಈಗಲೂ ಹಳೆಯದಾದ ಏಣಿ ಸಹಿತ ಕಬ್ಬಿಣದ ವಿದ್ಯುತ್ ಕಂಬಗಳೇ ಆಸರೆಯಾಗಿದೆ. ಬಂಡೆಕಲ್ಲುಗಳ ಮೇಲೆ ಹತ್ತುವಾಗಲು ಇಂತಹ ವಿದ್ಯುತ್ ಕಂಬಗಳು ಇದ್ದು, ನಿರ್ವಹಣೆ ಇಲ್ಲದೇ ಸೊರಗಿ ಹೋಗಿದೆ.

ಜಾತ್ರಾ ಸಮಯದಲ್ಲಿ ಬಾಡಿಗೆಗೆ ವಿದ್ಯುತ್ ದೀಪಗಳನ್ನು ಅಳವಡಿಸಿಕೊಳ್ಳಲಾಗುತ್ತದೆ. ಆದರೆ ಶಾಶ್ವತವಾಗಿರುವ ವಿದ್ಯುತ್ ಕಂಬದಲ್ಲಿ ಪುಟ್ಟ ದೀಪಗಳು ನೇತಾಡುತ್ತದೆ. ಇದರಿಂದ ಕಂಬದ ಬುಡಕ್ಕೆ ಬೆಳಕು ಬರುವುದಿಲ್ಲ. ನಗರದಲ್ಲಿ ಸಾಲು ಸಾಲಾಗಿ ಬೀದಿದೀಪಗಳು ಪ್ರಜ್ವಲಿಸುತ್ತಿದ್ದರೂ, ತೀರ್ಥ ಕ್ಷೇತ್ರದ ಗುಡ್ಡಪ್ರದೇಶದಲ್ಲಿ ಸರಿಯಾದ ಬೆಳಕಿನ ವ್ಯವಸ್ಥೆ ಇಲ್ಲ.

ಸೋಲಾರ್ ಉತ್ಪನ್ನಕ್ಕೆ ಹಾನಿ : ಪಾರ್ವತಿ ಕ್ಷೇತ್ರದಿಂದ ಈಶ್ವರ ದೇವರ ಸನ್ನಿಧಾನಕ್ಕೆ ತೆರಳುವ ಗುಡ್ಡಪ್ರದೇಶದಲ್ಲಿ ಸೋಲಾರ್ ಚಾರ್ಜರ್ ಲೈಟ್ ಅಳವಡಿಸಿರುತ್ತಾರೆ. ಆದರೆ ಕ್ಷೇತ್ರದಲ್ಲಿ ಮಂಗಗಳು ಜಾಸ್ತಿ ಇರುವುದರಿಂದ ಸೋಲಾರ್ ರಿಚಾರ್ಜ್ ಮಾಡುವ ಪ್ಯಾನಲ್‌ಬೋರ್ಡಿಗೆ ಹಾನಿ ಮಾಡಿದೆ. ಕಬ್ಬಿಣದ ಪೈಪ್‌ಗಳಿಗೂ ಹಾನಿಯಾಗಿದೆ.

.ಕ. ಜಿಲ್ಲೆಯ ಬಂಟ್ವಾಳ ತಾಲೂಕಿನ ಕಾವಳ ಮುಡೂರು ಗ್ರಾಮದಲ್ಲಿ ಸಮುದ್ರ ಮಟ್ಟದಿಂದ ಸುಮಾರು ಒಂದು ಸಾವಿರ ಅಡಿಗೂ ಮಿಕ್ಕಿ ಎತ್ತರದಲ್ಲಿರುವ ಶಿವ ಪಾರ್ವತಿಯರ ಆಕರ್ಷಣೀಯ ಆರಾಧನಾ ತಾಣವೇ ಕಾರಿಂಜ ಕ್ಷೇತ್ರವಾಗಿದ್ದು, ಕ್ಷೇತ್ರದ ಪ್ರಧಾನ ದೇವರು ಪಾರ್ವತಿ ಪರಮೇಶ್ವರ. ಶ್ರೀ ಮಹಾಗಣಪತಿ, ರಾಜನ್‌ದೈವ ಕೊಡಮಣಿತ್ತಾಯ ಮತ್ತು ಪಿಲಿಚಾಮುಂಡಿ, ಉಳ್ಳಾಲ್ತಿ ಅಮ್ಮನವರ ಸಾನಿಧ್ಯ ಇಲ್ಲಿದೆ. ಪುರಾಣಗಳ ಪ್ರಕಾರ ೪ ಯುಗಗಳಲ್ಲಿ ಆರಾಧಿಸಿಕೊಂಡು ಬಂದಂತಹ ೫ ಪಂಚಭೌತಿಕ ಲಿಂಗಗಳಲ್ಲಿ ಒಂದಾದ ಮಹತೋಭಾರ ಶ್ರೀ ಕಾರಿಂಜೇಶ್ವರ ಕ್ಷೇತ್ರ ಇದಾಗಿದೆ.

೬೦ ವರ್ಷಗಳ ಹಿಂದೆ ಹಾಕಿದ ವಿದ್ಯುತ್ ಕಂಬಗಳು ಈಗಲೂ ಇದ್ದು ಒಮ್ಮೆಯೂ ಅದನ್ನು ಬದಲಾವಣೆ ಮಾಡಿಲ್ಲ. ಅದರ ನಿರ್ವಹಣೆಯನ್ನೂ ಮಾಡದೆ ಇರುವ ಕಾರಣ ಈಗ ಆಗಾಗ ತಂತಿಗಳು ಜೋತಾಡುತ್ತಲೇ ಇರುತ್ತವೆ. ಇದರ ನಿರ್ವಹಣೆಯನ್ನು ಸರಿಯಾಗಿ ಮಾಡಿದರೆ ಮಾತ್ರ ಇಲ್ಲಿಗೆ ಬರುವ ಭಕ್ತಾದಿಗಳಿಗೆ ಅನುಕೂಲವಾಗುತ್ತದೆ.

ಕಾರಿಂಜ ಕ್ಷೇತ್ರದಲ್ಲಿ ಕೆಲವು ವಿದ್ಯುತ್ ಕಂಬಗಳು ಅಪಾಯದ ಸ್ಥಿತಿಯಲ್ಲಿದೆ. ಆದಷ್ಟು ಬೇಗ ಅದನ್ನು ಸುಸ್ಥಿತಿಗೆ ತರುವುದು ಅನಿವಾರ್ಯವಾಗಿದೆ. ಕಳೆದ ಹಲವಾರು ವರ್ಷಗಳಿಂದ ಕ್ಷೇತ್ರದಿಂದ ಮೆಸ್ಕಾಂ ಇಲಾಖೆಗೆ ಸಮಸ್ಯೆಯ ಬಗ್ಗೆ ಪತ್ರ ವ್ಯವಹಾರ ನಡೆದಿರುತ್ತದೆ. ಇಷ್ಟರ ತನಕ ಯಾವುದೇ ಕೆಲಸಗಳಾಗಲಿಲ್ಲ. ಮುಂದಿನ ದಿನಗಳಲ್ಲಿ ಮೆಸ್ಕಾಂ ಹಿರಿಯ ಅಧಿಕಾರಿಗಳಿಗೆ ತಿಳಿಸಿ, ಮುಂದಿನ ಜಾತ್ರೆಯೊಳಗೆ ಸರಿಮಾಡಲು ಪ್ರಯತ್ನಿಸಲಾಗುವುದು.-ಎಂದು ಶ್ರೀಕ್ಷೇತ್ರದ ಆಡಳಿತಾಧಿಕಾರಿ ಸಚಿನ್ ಕುಮಾರ್, ತಿಳಿಸಿದರು.

ಕಾರಿಂಜ ಕ್ಷೇತ್ರದಲ್ಲಿರುವ ವಿದ್ಯುತ್ ಕಂಬಗಳು ತುಂಬಾ ದುಸ್ಥಿತಿಯಲ್ಲಿದೆ. ಇಲ್ಲಿ ಇರುವುದು ಹಳೇಯಕಾಲದ ಕಬ್ಬಿಣದ ವಿದ್ಯುತ್ ಕಂಬಗಳು. ಅಷ್ಟೇ ಅಲ್ಲದೇ ಎಲ್ಲಾ ಕಂಬಗಳೂ ವಾಲಿಕೊಂಡಿರುತ್ತದೆ. ಕಂಬಗಳು ತುಕ್ಕು ಹಿಡಿದಿದೆ. ತಂತಿಗಳು ನೇತಾಡುತ್ತಿದೆ. ಅದರ ಸಾಮರ್ಥ್ಯವೂ ಕಡಿಮೆಯಾಗಿರುತ್ತದೆ. ಕಂಬದಲ್ಲಿರುವ ತಂತಿಗಳು ಆಗಾಗ ಬೀಳುತ್ತಿದ್ದು ಅಪಾಯವನ್ನು ಆಹ್ವಾನಿಸುತ್ತಿದೆ.- ಕೆ. ಮೋಹನ್ ಆಚಾರ್ಯ ಕಾರಿಂಜ, ಭಕ್ತಾದಿ.

ವಿದ್ಯುತ್ ಕಂಬಗಳು ತುಂಬಾ ದುಸ್ಥಿತಿಯಲ್ಲಿದ್ದು ಇದರ ಬಗ್ಗೆ ಸಂಬಂಧಪಟ್ಟ ಇಲಾಖೆಗೆ ಹಲವಾರು ಬಾರಿ ಮನವಿಯನ್ನು ನೀಡಿದರೂ ಭರವಸೆ ಮಾತ್ರ ನೀಡಿರುತ್ತಾರೆ. ಜಾತ್ರಾ ಸಮಯದಲ್ಲಿ ಲಕ್ಷಗಟ್ಟಲೆ ಭಕ್ತಾದಿಗಳು ಕ್ಷೇತ್ರಕ್ಕೆ ಆಗಮಿಸುತ್ತಾರೆ. ಆದಷ್ಟು ಬೇಗ ಹಳೆಯ ಕಬ್ಬಿಣದ ವಿದ್ಯುತ್ ಕಂಬಗಳನ್ನು ಬದಲಾಯಿಸಿ, ಹೊಸ ವಿದ್ಯುತ್ ಕಂಬಗಳನ್ನು ಅಳವಡಿಸಿ, ನಗರದಲ್ಲಿರುವಂತೆ ಹೆಚ್ಚು ಬೆಳಕಿರುವ ವಿದ್ಯುತ್ ದ್ವೀಪಗಳ ಅಳವಡಿಕೆಯಾಗಲಿ.- ಚಂದ್ರಶೇಖರ ಶೆಟ್ಟಿ ಪುಲಿಮಜಲು, ಮಾಜಿ ಅಧ್ಯಕ್ಷರು ವ್ಯವಸ್ಥಾಪನಾ ಸಮಿತಿ, ಶ್ರೀ ಕ್ಷೇತ್ರ ಕಾರಿಂಜ

ವರದಿ: ಯಾದವ ಕುಲಾಲ್ ಅಗ್ರಬೈಲು

Leave a Reply

Your email address will not be published. Required fields are marked *