ಬಿ.ಸಿ.ರೋಡ್ : ಬಿ.ಸಿ.ರೋಡಿನ ಅಜ್ಜಿಬೆಟ್ಟು ಬಳಿ ಶಾಲಾ ಮೈದಾನದಲ್ಲಿ ಒಂದು ಅಪಾಯಕಾರಿ ಹೊಂಡ ಸೃಷ್ಟಿಯಾಗಿದೆ. ಕಳೆದ ಕೆಲವು ಸಮಯಗಳಿಂದ ಚಿಕ್ಕದಾಗಿದ್ದ ಹೊಂಡ ಈಗ ಅಗಾಧವಾಗಿ ಬಾಯತ್ದೆರೆದಿದೆ.
ಅಜ್ಜಿಬೆಟ್ಟುವಿನಲ್ಲಿ ಬಿ.ಮೂಡ ಸರಕಾರಿ ಹಿರಿಯ ಪಾಥಮಿಕ ಶಾಲೆ ಮತ್ತು ಪ್ರೌಢ ಶಾಲೆ ಇದ್ದು, ಎರಡೂ ಶಾಲೆಗಳ ನೂರಾರು ಮಕ್ಕಳ ದೈಹಿಕ ಶಿಕ್ಷಣ ಚಟುವಟಿಕೆಗಳಿಗೆ ಈ ಮೈದಾನವೇ ಆಸರೆ.ಪ್ರಸ್ತುತ ಶಾಲಾ ಆಟದ ಮೈದಾನ ಮಧ್ಯದಲ್ಲಿ ಹೊಂಡವೊಂದು ರೂಪುಗೊಂಡಿದ್ದು, ಹೊರನೋಟಕ್ಕೆ ಕಾಣಿಸದಿದ್ದರೂ ಹತ್ತಿರ ಬಂದಾಗ ಬೃಹದಾಕಾರವಾಗಿರುವುದು ಗೋಚರವಾಗುತ್ತದೆ.




ಇದು ಯಾವ ರೀತಿ ನಿರ್ಮಾಣದ ಕುರಿತು ಯಾರಿಗೂ ಮಾಹಿತಿ ಇದುವರೆಗೂ ಇಲ್ಲ. ಶಾಲೆಯಿಂದ ಸುಮಾರು ೧೦೦ ಮೀಟರ್ ದೂರದಲ್ಲಿ ಮೈದಾನವಿರುವ ಕಾರಣ, ಶಾಲೆಯ ಗಮನಕ್ಕೆ ಮಾಹಿತಿ ಬಂದ ತಕ್ಷಣ ಸಂಬಂಧಪಟ್ಟವರ ಗಮನಕ್ಕೆ ತರಲಾಗಿದೆ. ಆದರೆ ಹೊಂಡವನ್ನು ಯಾರು ಮಾಡಿದ್ದು, ಹೇಗೆ ಆಯಿತು ಎಂಬುದು ನಿಗೂಢವಾಗಿದೆ. ಅಲ್ಲದೆ, ಶಾಲಾ ಮಕ್ಕಳು ಇಲ್ಲಿ ಆಟವಾಡಲು ಅಸಾಧ್ಯವಾಗುವ ಪರಿಸ್ಥಿತಿ ನಿರ್ಮಾಣವಾಗಿದೆ.
ಏಕೈಕ ಸರಕಾರಿ ಶಾಲಾ ಮೈದಾನ : ಬಂಟ್ವಾಳ ಪುರಸಭೆ ವ್ಯಾಪ್ತಿಯಲ್ಲಿ ಸರಕಾರಿ ಶಾಲೆಯ ದೊಡ್ಡ ಮೈದಾನವೆಂದರೆ ಅಜ್ಜಿಬೆಟ್ಟು ಗ್ರೌಂಡ್. ಆದರೆ ಇಲ್ಲಿ ಅನುದಾನದ ಕೊರತೆಯಿಂದ ಇದನ್ನು ಕ್ರೀಡಾಸ್ನೇಹಿಯಾಗಿ ರೂಪುಗೊಳಿಸಲಾಗಿಲ್ಲ. ಹಿಂದೆ ಈ ಮೈದಾನದಲ್ಲೇ ರಾಷ್ಟ್ರೀಯ ಮಟ್ಟದ ವಾಲಿಬಾಲ್ ಪಂದ್ಯಾಕೂಟವೂ ನಡೆದಿತ್ತು. ನಿರಂತರವಾಗಿ ಕ್ರೀಡಾಚಟುವಟಿಕೆ ಈ ಮೈದಾನದಲ್ಲಿ ನಡೆಯುತ್ತಿತ್ತು. ಇದಕ್ಕೊಂದು ಆವರಣ ನಿರ್ಮಾಣ ಸಹಿತ ಅಭಿವೃದ್ಧಿ ಕಾರ್ಯಗಳು ಆಗಬೇಕಾಗಿದೆ. ಇಷ್ಟೆಲ್ಲ ಸಮಸ್ಯೆಗಳು ಇರುವ ವೇಳೆ ಈ ಮೈದಾನ ಕ್ರೀಡಾಸ್ನೇಹಿಯಾಗಿರದೇ ವಾಹನ ಪಾರ್ಕಿಂಗ್‌ಗೆ ಸೀಮಿತವಾದಂತಿದೆ.
ಶಾಲಾ ಕ್ರೀಡಾಮೈದಾನ ಅಭಿವೃದ್ಧಿಯಾಗಬೇಕಾಗಿದೆ. ಇದಕ್ಕೊಂದು ಅಥ್ಲೆಟಿಕ್ ಟ್ರ್ಯಾಕ್, ಕಬಡ್ಡಿ, ವಾಲಿಬಾಲ್ ಕ್ರೀಡಾಕೂಟ ಮಾಡಲು ವ್ಯವಸ್ಥೆ, ಮೈದಾನಕ್ಕೊಂದು ಆವರಣ ಅಗತ್ಯವಿದೆ. ಈಗಾಗಲೇ ಪ್ರೌಢಶಾಲೆಯ ಮಕ್ಕಳ ಸಂಖ್ಯೆ ಹೆಚ್ಚಳವಾಗಿದ್ದು ಎಸ್ಸೆಸ್ಸೆಲ್ಸಿಯಲ್ಲಿ ಶೇ.೧೦೦ ಫಲಿತಾಂಶ ದಾಖಲಾಗಿದ್ದರೆ, ಪ್ರಾಥಮಿಕ ಶಾಲೆಯಲ್ಲಿ ಕಂಪ್ಯೂಟರ್ ಶಿಕ್ಷಣ ನೀಡುವ ಮೂಲಕ ಮಕ್ಕಳ ಸಂಖ್ಯೆ ಜಾಸ್ತಿಯಾಗಿದೆ. ಹೀಗಾಗಿ ಕ್ರೀಡಾ ಅವಶ್ಯಕತೆಗೊಂದು ಮೈದಾನ ಸುಸಜ್ಜಿತವಾದರೆ ಚೆನ್ನಾಗಿರುತ್ತದೆ.
ವರದಿ : ಯಾದವ ಕುಲಾಲ್ ಅಗ್ರಬೈಲು



