ವಿಟ್ಲ : ವಿಟ್ಲ ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನದಲ್ಲಿ ಡಿ.೩೧ರಿಂದ ಜ.೧ರವರೆಗೆ ಕುಂಟುಕುಡೇಲು ರಘುರಾಮ ತಂತ್ರಿಯವರ ನೇತೃತ್ವದಲ್ಲಿ ಕಾಲಾವಧಿ ಜಾತ್ರೋತ್ಸವ ನಡೆಯಲಿದೆ ಎಂದು ಶ್ರೀ ಅಯ್ಯಪ್ಪ ಸ್ವಾಮಿ ಸೇವಾ ಟ್ರಸ್ಟಿನ ಅಧ್ಯಕ್ಷ ಅರುಣ್ ಎಂ.ವಿಟ್ಲ ಹೇಳಿದರು.
ಅವರು ದೇವಸ್ಥಾನದಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಡಿ.೩೧ರಂದು ಬೆಳಗ್ಗೆ ಗಣಪತಿ ಹೋಮ, ನಾಗತಂಬಿಲ, ಕಲಶಾಭಿಷೇಕ, ತುಲಾಭಾರ ಸೇವೆ, ಮಹಾಪೂಜೆ, ಅನ್ನಸಂತರ್ಪಣೆ, ಸಂಜೆ ರಂಗ ಪೂಜೆ, ದುರ್ಗಾ ಪೂಜೆ, ಉತ್ಸವ ಬಲಿ, ಅನ್ನಸಂತರ್ಪಣೆ ನಡೆಯಲಿದೆ. ಜ.೧ರಂದು ಬೆಳಗ್ಗೆ ಗಂಟೆ ೭ಕ್ಕೆ ಶ್ರೀ ಭೂತಬಲಿ, ದರ್ಶನ ಬಲಿ, ರಾಜಾಂಗಣಪ್ರಸಾದ, ಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ, ಸಂಜೆ ಕಲಶ ಪೂರಣೆ, ಪೇಟೆ ಸವಾರಿ, ಶುದ್ಧ ಕಲಶಾಭಿಷೇಕ, ಹನುಮಗಿರಿ ಮೇಳದವರಿಂದ ದೇವೀ ಮಹಾತ್ಮೆ ಎಂಬ ಯಕ್ಷಗಾನ ಬಯಲಾಟ ನಡೆಯಲಿದೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಕಾರ್ಯದರ್ಶಿ ರವಿಚಂದ್ರ ವಿಟ್ಲ, ಧರ್ಣಪ್ಪ ಗುರುಸ್ವಾಮಿ, ಬಾಲಕೃಷ್ಣ ವಿಟ್ಲ, ಯಾದವ, ಪವನ್, ವೇಣುಗೋಪಾಲ ಮತ್ತಿತರರು ಉಪಸ್ಥಿತರಿದ್ದರು.



