Breaking
24 Jun 2026, Wed

ಮೈಸೂರು ದಸರಾ ವೇಳೆ ಮೊದಲ ಬಾರಿಗೆ ಕಂಬಳ: 100ಕ್ಕೂ ಹೆಚ್ಚು ಜೋಡಿ ಕೋಣಗಳು ಭಾಗವಹಿಸುವ ನಿರೀಕ್ಷೆ

ಮೈಸೂರು: ನಾಡಹಬ್ಬ ಮೈಸೂರು ದಸರಾ ಉತ್ಸವದ ಅಂಗವಾಗಿ ಇದೇ ಮೊದಲ ಬಾರಿಗೆ ಮೈಸೂರು ಕಂಬಳ ಉತ್ಸವ ಆಯೋಜಿಸಲು ಸಿದ್ಧತೆ ನಡೆಯುತ್ತಿದ್ದು, 100ಕ್ಕೂ ಹೆಚ್ಚು ಜೋಡಿ ಕೋಣಗಳು ಭಾಗವಹಿಸುವ ನಿರೀಕ್ಷೆಯಿದೆ. ಉತ್ಸವ ಆಯೋಜನೆಗೆ ಸುಮಾರು ₹7 ಕೋಟಿ ವೆಚ್ಚ ಅಂದಾಜಿಸಲಾಗಿದೆ.

ಈ ಕುರಿತು ಜಿಲ್ಲಾಡಳಿತ ಹಾಗೂ ಕಂಬಳ ಉತ್ಸವ ಸಮಿತಿ ಪದಾಧಿಕಾರಿಗಳ ಸಭೆ ನಡೆದಿದ್ದು, ಉತ್ಸವದ ರೂಪುರೇಷೆ ಮತ್ತು ಆಯೋಜನಾ ವ್ಯವಸ್ಥೆಗಳ ಕುರಿತು ಚರ್ಚೆ ನಡೆಸಲಾಗಿದೆ.

ಕಂಬಳ ಉತ್ಸವಕ್ಕಾಗಿ ಮೈಸೂರಿನ ಮೂರು ಸ್ಥಳಗಳನ್ನು ಗುರುತಿಸಲಾಗಿದ್ದು, ಅವುಗಳಲ್ಲಿ ವಿಜಯನಗರದ ಐಶ್ವರ್ಯ ಪೆಟ್ರೋಲ್ ಬಂಕ್ ಸಮೀಪದ ಎಂಡಿಎಗೆ ಸೇರಿದ 15 ಎಕರೆ ಕ್ರೀಡಾ ಮೈದಾನ ಹಾಗೂ ಸಾತಗಳ್ಳಿ ವಿಟಿಟಿಯು ಸಮೀಪದ 23 ಎಕರೆ ಮೈದಾನ ಪ್ರಮುಖವಾಗಿ ಪರಿಶೀಲನೆಗೆ ಒಳಪಟ್ಟಿವೆ. ಮುಂದಿನ ವಾರ ನಡೆಯುವ ಎರಡನೇ ಸಭೆಯಲ್ಲಿ ಅಂತಿಮ ಸ್ಥಳ ಆಯ್ಕೆ ಮಾಡುವ ನಿರೀಕ್ಷೆಯಿದೆ.

ತುಳುನಾಡಿನ ಪ್ರಸಿದ್ಧ ಕಂಬಳಗಳಲ್ಲಿ ಪಾಲ್ಗೊಳ್ಳುವ 100ಕ್ಕೂ ಹೆಚ್ಚು ಜೋಡಿ ಕೋಣಗಳು ಮೈಸೂರು ಕಂಬಳ ಉತ್ಸವದಲ್ಲಿ ಭಾಗವಹಿಸುವ ಸಾಧ್ಯತೆ ಇದೆ. ಈಗಾಗಲೇ ಮಂಗಳೂರು, ಪುತ್ತೂರು, ಕಾರ್ಕಳ, ಉಡುಪಿ, ಮೂಡಬಿದ್ರೆ, ಸುಳ್ಯ ಸೇರಿದಂತೆ ವಿವಿಧ ಭಾಗಗಳ ಕೋಣ ಮಾಲೀಕರಿಗೆ ಆಹ್ವಾನ ನೀಡಲಾಗಿದೆ.
ಕಂಬಳ ಉತ್ಸವವನ್ನು ಅಕ್ಟೋಬರ್ 8ರಿಂದ 19ರೊಳಗಿನ ದಸರಾ ಅವಧಿಯಲ್ಲಿ ನಿಗದಿಯಾಗುವ ದಿನಾಂಕದಂದು ನಡೆಸಲು ತೀರ್ಮಾನಿಸಲಾಗಿದೆ.

Leave a Reply

Your email address will not be published. Required fields are marked *