Breaking
25 Sep 2026, Fri

ಬಸ್ ನಿಲ್ದಾಣಕ್ಕೆ ನುಗ್ಗಿದ ಟಿಪ್ಪರ್; ಮೂವರು ಸಾವು, ಹಲವರಿಗೆ ಗಾಯ

ಕೇರಳ: ಕೊಲ್ಲಂ ಜಿಲ್ಲೆಯ ಕೊಟ್ಟಾರಕ್ಕರದಲ್ಲಿ ಮಂಗಳವಾರ ಮುಂಜಾನೆ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ನಿಯಂತ್ರಣ ತಪ್ಪಿದ ಟಿಪ್ಪರ್ ಲಾರಿಯೊಂದು ಬಸ್ ನಿಲ್ದಾಣಕ್ಕೆ ನುಗ್ಗಿ ಪಲ್ಟಿಯಾದ ಪರಿಣಾಮ ಮೂವರು ಸ್ಥಳದಲ್ಲೇ ಮೃತಪಟ್ಟಿದ್ದು, ಹಲವರು ಗಂಭೀರವಾಗಿ ಗಾಯಗೊಂಡಿದ್ದಾರೆ.

ಮೃತರನ್ನು ಹರಿಲಾಲ್ (54), ಪಾರ್ಥಿಬ್ (15) ಮತ್ತು ಅಜಯ್ಕುಮಾರ್ (45) ಎಂದು ಗುರುತಿಸಲಾಗಿದೆ.

ಮಂಗಳವಾರ ಬೆಳಗ್ಗೆ ಸುಮಾರು 7.15ರ ಸುಮಾರಿಗೆ ಅತಿವೇಗವಾಗಿ ಬಂದ ಮರಳು ತುಂಬಿದ ಟಿಪ್ಪರ್ ಲಾರಿಯೊಂದು ಬೈಕ್ನ್ನು ಓವರ್ಟೇಕ್ ಮಾಡಲು ಯತ್ನಿಸಿದೆ. ಈ ವೇಳೆ ನಿಯಂತ್ರಣ ತಪ್ಪಿದ ಲಾರಿ ಮುಂಭಾಗದಲ್ಲಿದ್ದ ಬಸ್ಗೆ ಡಿಕ್ಕಿ ಹೊಡೆದು, ರಸ್ತೆ ಬದಿಯ ಬಸ್ ನಿಲ್ದಾಣದ ಮೇಲೆ ಉರುಳಿಬಿದ್ದಿದೆ.

ಲಾರಿಯಲ್ಲಿದ್ದ ಮರಳು ಸಂಪೂರ್ಣವಾಗಿ ಬಸ್ ನಿಲ್ದಾಣದ ಮೇಲೆ ಬಿದ್ದ ಪರಿಣಾಮ, ಅಲ್ಲಿ ಬಸ್ಗಾಗಿ ಕಾಯುತ್ತಿದ್ದ ಹಲವರು ಮರಳಿನಡಿ ಸಿಲುಕಿಕೊಂಡಿದ್ದಾರೆ. ಅಪಘಾತದ ತೀವ್ರತೆಗೆ ಸಮೀಪದ ಅಂಗಡಿಯ ಗೋಡೆ ಹಾಗೂ ವಿದ್ಯುತ್ ಕಂಬವೂ ಧರಾಶಾಯಿಯಾಗಿದೆ.

ಗಾಯಾಳುಗಳನ್ನು ತಕ್ಷಣ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಕೆಲವರ ಸ್ಥಿತಿ ಗಂಭೀರವಾಗಿದೆ. ಅಪಘಾತದ ವೇಳೆ ಬಸ್ ನಿಲ್ದಾಣದಲ್ಲಿ ಶಾಲಾ-ಕಾಲೇಜು ವಿದ್ಯಾರ್ಥಿಗಳು ಸೇರಿದಂತೆ ಸುಮಾರು 12 ಮಂದಿ ಇದ್ದರು ಎಂದು ತಿಳಿದುಬಂದಿದೆ. ಲಾರಿ ನಿಯಂತ್ರಣ ತಪ್ಪುತ್ತಿರುವುದನ್ನು ಗಮನಿಸಿದ ಕೆಲ ವಿದ್ಯಾರ್ಥಿಗಳು ತಕ್ಷಣ ಸ್ಥಳದಿಂದ ಓಡಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಘಟನಾ ಸ್ಥಳಕ್ಕೆ ಅಗ್ನಿಶಾಮಕ ದಳ ಹಾಗೂ ಪೊಲೀಸರು ಧಾವಿಸಿ, ಜೆಸಿಬಿ ನೆರವಿನಿಂದ ಮರಳನ್ನು ತೆರವುಗೊಳಿಸಿ ರಕ್ಷಣಾ ಕಾರ್ಯಾಚರಣೆ ನಡೆಸುತ್ತಿದ್ದಾರೆ.

ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಅಪಘಾತದ ನಿಖರ ಕಾರಣ ಕುರಿತು ತನಿಖೆ ಮುಂದುವರಿಸಿದ್ದಾರೆ.

Leave a Reply

Your email address will not be published. Required fields are marked *