Breaking
9 Aug 2026, Sun

ಮಗು ಅಕ್ರಮ ಮಾರಾಟ ಪ್ರಕರಣ: ವೈದ್ಯ, ದಂಪತಿ ಸೇರಿ ನಾಲ್ವರ ಬಂಧನ

ಉಡುಪಿ: ಒಂದು ತಿಂಗಳ ಹೆಣ್ಣು ಮಗುವನ್ನು ಅಕ್ರಮವಾಗಿ ಮಾರಾಟ ಮಾಡಿ ಅನಧಿಕೃತವಾಗಿ ಸಾಕುತ್ತಿರುವ ಪ್ರಕರಣಕ್ಕೆ ಸಂಬಂಧಿಸಿ ವೈದ್ಯರು ಸೇರಿದಂತೆ ನಾಲ್ವರನ್ನು ಉಡುಪಿ ಪೊಲೀಸರು ಬಂಧಿಸಿದ್ದಾರೆ.
ಪ್ರಕರಣದಲ್ಲಿ ಉಡುಪಿಯ ಕಾಮತ್ ನರ್ಸಿಂಗ್ ಹೋಮ್ನ ವೈದ್ಯ ಡಾ. ಕೆ. ಸುರೇಂದ್ರ ಕಾಮತ್ (76), ಸಂತೆಕಟ್ಟೆ ನೇಜಾರು ರಾಜೀವ್ ನಗರ ನಿವಾಸಿ ಎಸ್. ಪ್ರಕಾಶ್ (50), ಕಾರ್ಕಳದ ಸಂಪತ್ (22) ಹಾಗೂ ನಂದಳಿಕೆಯ ಕೆದಿಂಜೆ ನಿವಾಸಿ ಸುಪ್ರಿತಿ (22) ಬಂಧಿತ ಆರೋಪಿಗಳಾಗಿದ್ದಾರೆ.

ಜೂನ್ 19ರಂದು ಬ್ರಹ್ಮಾವರ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿಯ ವಲಯ ಮೇಲ್ವಿಚಾರಕರು ಮಕ್ಕಳ ರಕ್ಷಣಾ ಘಟಕಕ್ಕೆ ಮಾಹಿತಿ ನೀಡಿದ್ದು, ಸಂತೆಕಟ್ಟೆಯ ದಂಪತಿ ಪ್ರಕಾಶ್ ಹಾಗೂ ಪೂರ್ಣಿಮಾ ಅವರು ಸುಮಾರು ಒಂದು ತಿಂಗಳ ಹೆಣ್ಣು ಮಗುವನ್ನು ಯಾವುದೇ ಕಾನೂನಾತ್ಮಕ ದಾಖಲೆಗಳಿಲ್ಲದೆ ಸಾಕುತ್ತಿದ್ದಾರೆ ಎಂಬ ಮಾಹಿತಿ ಲಭ್ಯವಾಗಿತ್ತು.

ಈ ಹಿನ್ನೆಲೆಯಲ್ಲಿ ಮಕ್ಕಳ ರಕ್ಷಣಾ ಘಟಕದ ಅಧಿಕಾರಿಗಳು ಮನೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ವೇಳೆ ದಂಪತಿ ಮಗುವಿನ ಬಗ್ಗೆ ಅನುಮಾನಾಸ್ಪದ ಹಾಗೂ ಅಸಮಂಜಸ ಮಾಹಿತಿ ನೀಡಿರುವುದು ಬೆಳಕಿಗೆ ಬಂದಿದೆ.
ತನಿಖೆಯಲ್ಲಿ ದಂಪತಿಗೆ ಮದುವೆಯಾಗಿ 11 ವರ್ಷಗಳಾಗಿದ್ದು ಮಕ್ಕಳಿಲ್ಲ ಎಂಬುದು ತಿಳಿದುಬಂದಿದೆ. ಅವರು ಉಡುಪಿಯ ಕಾಮತ್ ನರ್ಸಿಂಗ್ ಹೋಮ್ನಲ್ಲಿ ಸಂತಾನೋತ್ಪತ್ತಿ ಚಿಕಿತ್ಸೆಗೆ ಒಳಗಾಗುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಈ ಅವಧಿಯಲ್ಲಿ ಆಸ್ಪತ್ರೆಯಲ್ಲಿ ನವಜಾತ ಶಿಶು ಲಭ್ಯವಿದೆ ಎಂಬ ಮಾಹಿತಿ ದಂಪತಿಗೆ ತಲುಪಿದ್ದು, ಬಳಿಕ ವೈದ್ಯರನ್ನು ಸಂಪರ್ಕಿಸಿ ಮಗುವನ್ನು ಹಸ್ತಾಂತರಿಸುವಂತೆ ವಿನಂತಿಸಿದ್ದರೆಂದು ಆರೋಪಿಸಲಾಗಿದೆ. ವೈದ್ಯರು ಮಗುವನ್ನು ದಂಪತಿಗೆ ನೀಡಿದ್ದು, ಬಳಿಕ ಮಗುವಿನ ಹೆಸರಿನಲ್ಲಿ ಜನನ ಪ್ರಮಾಣಪತ್ರ ಸೃಷ್ಟಿಸಿ ದಂಪತಿಯನ್ನು ಪೋಷಕರಾಗಿ ದಾಖಲಿಸಲಾಗಿದೆ ಎಂಬ ಆರೋಪ ಕೇಳಿಬಂದಿದೆ.

ಮಗುವಿನ ಜೈವಿಕ ಪೋಷಕರ ಕುರಿತು ದಂಪತಿಗೆ ಮಾಹಿತಿ ಇಲ್ಲ ಎಂದು ವಿಚಾರಣೆ ವೇಳೆ ತಿಳಿದುಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಅಕ್ರಮ ಲಾಭದ ಉದ್ದೇಶದಿಂದ ನಕಲಿ ದಾಖಲೆ ಸೃಷ್ಟಿಸಿ ಮಗುವಿನ ಅಕ್ರಮ ವರ್ಗಾವಣೆ ಹಾಗೂ ಮಾರಾಟಕ್ಕೆ ಸಂಚು ರೂಪಿಸಿರುವ ಆರೋಪದಡಿ ಉಡುಪಿ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *