Breaking
23 Jun 2026, Tue

ಕೋತಲಕಟ್ಟೆ ಡೈವರ್ಷನ್ ಬಳಿ ಮೂರು ಕಾರುಗಳ ಸರಣಿ ಅಪಘಾತ

ಕಾಪು: ರಾಷ್ಟ್ರೀಯ ಹೆದ್ದಾರಿ 66ರ ಕೋತಲಕಟ್ಟೆ ಜಂಕ್ಷನ್ನ ಡೈವರ್ಷನ್ ಬಳಿ ಸೋಮವಾರ ಸಂಜೆ ಮೂರು ಕಾರುಗಳ ನಡುವೆ ಸರಣಿ ಅಪಘಾತ ಸಂಭವಿಸಿ ವಾಹನಗಳು ಜಖಂಗೊಂಡ ಘಟನೆ ನಡೆದಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.

ಮಂಗಳೂರಿನಿಂದ ಉಡುಪಿ ಕಡೆಗೆ ರೋಗಿಯೊಬ್ಬರನ್ನು ಕರೆದೊಯ್ಯುತ್ತಿದ್ದ ಕಾರು ಕೋತಲಕಟ್ಟೆ ಡಿವೈಡರ್ ಡೈವರ್ಷನ್ ಮೂಲಕ ಹೆದ್ದಾರಿಗೆ ಪ್ರವೇಶಿಸಿದ ವೇಳೆ, ಉಡುಪಿ ಕಡೆಗೆ ಸಾಗುತ್ತಿದ್ದ ಮತ್ತೊಂದು ಕಾರಿನ ಚಾಲಕ ಅಪಘಾತ ತಪ್ಪಿಸಲು ವಾಹನವನ್ನು ಎಡಕ್ಕೆ ಚಲಾಯಿಸಿದ್ದಾನೆ. ಈ ವೇಳೆ ಅದೇ ದಿಕ್ಕಿನಲ್ಲಿ ಸಾಗುತ್ತಿದ್ದ ಕರಾವಳಿ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಎಂ.ಎ. ಗಫೂರ್ ಅವರ ಕಾರಿಗೆ ಢಿಕ್ಕಿ ಹೊಡೆದ ಪರಿಣಾಮ ಮೂರು ಕಾರುಗಳು ಹಾನಿಗೊಳಗಾದವು ಎಂದು ತಿಳಿದುಬಂದಿದೆ.

ಅಪಘಾತದ ವೇಳೆ ಕಾರಿನಲ್ಲಿದ್ದ ಎಲ್ಲರೂ ಗಾಯಗಳಿಲ್ಲದೆ ಪಾರಾಗಿದ್ದಾರೆ. ಘಟನೆಯಿಂದ ಕೆಲಕಾಲ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚಾರ ಅಸ್ತವ್ಯಸ್ತಗೊಂಡಿದ್ದು, ಸ್ಥಳಕ್ಕೆ ಆಗಮಿಸಿದ ಕಾಪು ಪೊಲೀಸರು ವಾಹನ ಸಂಚಾರವನ್ನು ಸುಗಮಗೊಳಿಸಿದರು.
ಪ್ರಾಥಮಿಕ ಮಾಹಿತಿಯಂತೆ, ರೋಗಿಯನ್ನು ಕರೆದೊಯ್ಯುತ್ತಿದ್ದ ಕಾರು ಚಾಲಕನ ಅಜಾಗರೂಕತೆಯೇ ಅಪಘಾತಕ್ಕೆ ಕಾರಣ ಎನ್ನಲಾಗಿದೆ. ಆದರೆ ಅಪಘಾತಕ್ಕೆ ಕಾರಣವಾದ ಕಾರಿನಲ್ಲಿ ರೋಗಿಯೊಬ್ಬರು ಇದ್ದ ಕಾರಣ, ಅವರಿಗೆ ತುರ್ತು ಚಿಕಿತ್ಸೆಗಾಗಿ ಮುಂದುವರೆಯಲು ಅವಕಾಶ ನೀಡುವ ಮೂಲಕ ಕರಾವಳಿ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಎಂ.ಎ. ಗಫೂರ್ ಮಾನವೀಯತೆ ಮೆರೆದರು.

ಸ್ಥಳೀಯರ ಪ್ರಕಾರ ರಾಷ್ಟ್ರೀಯ ಹೆದ್ದಾರಿ 66ರ ಉಳಿಯಾರಗೋಳಿ–ಕೋತಲಕಟ್ಟೆ ಜಂಕ್ಷನ್ ಹಾಗೂ ಡಿವೈಡರ್ ಭಾಗ ಅಪಾಯಕಾರಿಯಾಗಿ ಪರಿಣಮಿಸಿದ್ದು, ಇಲ್ಲಿ ಈಗಾಗಲೇ ಹಲವು ಅಪಘಾತಗಳು ಸಂಭವಿಸಿವೆ. ಈ ಹಿನ್ನೆಲೆಯಲ್ಲಿ ವಾಹನಗಳ ವೇಗ ನಿಯಂತ್ರಣಕ್ಕಾಗಿ ಬ್ಯಾರಿಕೇಡ್ ಅಳವಡಿಕೆ, ಸೂಕ್ತ ಸಿಗ್ನಲ್ ವ್ಯವಸ್ಥೆ ಹಾಗೂ ಸುರಕ್ಷತಾ ಕ್ರಮಗಳನ್ನು ತಕ್ಷಣ ಕೈಗೊಳ್ಳುವಂತೆ ಎಂ.ಎ. ಗಫೂರ್ ಹಾಗೂ ಹಿರಿಯ ವೈದ್ಯ ಡಾ. ಸುರೇಶ್ ಕುಮಾರ್ ಆಗ್ರಹಿಸಿದ್ದಾರೆ.

Leave a Reply

Your email address will not be published. Required fields are marked *