ವಿಟ್ಲ: ವಿಟ್ಲ ಪಟ್ಟಣ ಪಂಚಾಯತ್ ಸಾಮಾನ್ಯ ಸಭೆ ಅಧ್ಯಕ್ಷ ಕರುಣಾಕರ ನಾಯ್ತೊಟ್ಟು ಅವರ ಅಧ್ಯಕ್ಷತೆಯಲ್ಲಿ ಮಂಗಳವಾರ ಜರಗಿತು.5 ಸೆಂಟ್ಸ್ ಮತ್ತು ಅದಕ್ಕಿಂತ ಕಡಿಮೆ ಜಾಗ ಇರುವ ವ್ಯಕ್ತಿಗೆ ಆಫ್ ಲೈನ್ ನಲ್ಲಿ ಮನೆ ಪರವಾನಿಗೆ ನೀಡುವ ಬಗ್ಗೆ ನಿರ್ಣಯ ಕೈಗೊಳ್ಳಬೇಕೆಂದು ಪಟ್ಟಣ ಪಂಚಾಯತ್ ಸದಸ್ಯ ಅರುಣ್ ವಿಟ್ಲ ಆಗ್ರಹಿಸಿದರು.
ಆನ್ ಲೈನಿನಲ್ಲಿ ನೋಂದಣಿ ಮಾಡುವ ಸಂದರ್ಭದಲ್ಲಿ ಆಗುವ ಗೊಂದಲ ಹಾಗೂ ಶುಲ್ಕ ಬಡಜನರಿಗೆ ಆಗುವ ಆರ್ಥಿಕ ಹೊರೆಯ ಬಗ್ಗೆ ಸವಿಸ್ತಾರವಾಗಿ ವಿವರಿಸಿದರು. ಈ ಬಗ್ಗೆ ಧ್ವನಿಗೂಡಿಸಿದಅಬ್ದುಲ್ ರಹಿಮಾನ್ ಹಸೈನಾರ್ ನೆಲ್ಲಿಗುಡ್ಡೆ ಅವರು ಈ ಬಗ್ಗೆ ನಿರ್ಣಯ ಕೈಗೊಳ್ಳಬೇಕೆಂದು ಒತ್ತಾಯಿಸಿದರು. ಮನೆ ಕಟ್ಟಬೇಕಾದರೆ ಪುತ್ತೂರು ನಗರಾಭಿವೃದ್ಧಿ ಪ್ರಾಧಿಕಾರಕ್ಕೂ ಹಣ ಪಾವತಿಸಿ ಲೈಸೆನ್ಸ್ ಪಟ್ಟಣ ಪಂಚಾಯತಿಯಲ್ಲಿ ಕೂಡಾ ಹಣ ಪಾವತಿಸಬೇಕು. ಇದು ಜನಸಾಮಾನ್ಯರಿಗೆ ತುಂಬಲಾರದ ಹೊರೆ ಆಗುತ್ತಿದೆ ಎಂದರು.
ವಿ. ಕೆ.ಎಂ. ಅಶ್ರಫ್, ಅಶೋಕ್ ಕುಮಾರ್ ಶೆಟ್ಟಿ , ಇಕ್ಬಾಲ್, ಸ್ಥಾಯಿ ಸಮಿತಿ ಅಧ್ಯಕ್ಷ ರವಿಪ್ರಕಾಶ್ ಅವರು ಚರ್ಚೆಯಲ್ಲಿ ಪಾಲ್ಗೊಂಡರು. ಚರ್ಚೆಯ ಬಳಿಕ ಪಕ್ಷಭೇದ ಮರೆತು ಈ ಕುರಿತು ನಿರ್ಣಯ ಕೈಗೊಳ್ಳುವಂತೆ ಒತ್ತಾಯಿಸಿದರು.
ತೆರಿಗೆ ಕಟ್ಟುವವನಿಗೆ ಪ್ರವೇಶ ಪತ್ರ ಅಂತ 500ರೂ. ಕಟ್ಟಬೇಕಿದೆ.ಬೇರೆ ಕಡೆ ಇಲ್ಲದ ಹೊಸ ನಿಯಮಗಳು ವಿಟ್ಲ ಪಟ್ಟಣ ಪಂಚಾಯತಿಯಲ್ಲಿ ಯಾಕೆ ಎಂದು ಆಶ್ರಫ್ ಪ್ರಶ್ನೆ ಮಾಡಿದರು. ಇದು ಸರ್ಕಾರದ ಸುತ್ತೋಲೆ ಎಂದು ಮುಖ್ಯಾಧಿಕಾರಿ ಸಮರ್ಥಿಸಿಕೊಂಡರು.ಮುಂದಿನ ತಿಂಗಳು ಸೀಮೆಯ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಜಾತ್ರೆ ನಡೆಯಲಿದ್ದು,ಸಂತೆ ಶುಲ್ಕ ವಸೂಲಿ ಹರಾಜು ಮಾಡುವ ಕುರಿತು ಗಂಭೀರ ಚರ್ಚೆ ನಡೆಯಿತು.

ವಿಷಯದ ಬಗ್ಗೆ ಮಾತನಾಡಿದ ಅಶೋಕ್ ಕುಮಾರ್ ಶೆಟ್ಟಿ ಶುಲ್ಕ ವಸೂಲಿ ಹರಾಜಿನ ಟೆಂಡರ್ ಮೊತ್ತ 3 ಲಕ್ಷಕ್ಕೆ ಇಳಿಸಬೇಕು. ಟೆಂಡರ್ ಮೊತ್ತ ಏರಿಸಿದರೆ ವ್ಯಾಪಾರಿಗಳು ಬಾಡಿಗೆ ಹೆಚ್ಚು ಕೊಡಬೇಕು. ಇದರಿಂದಾಗಿ ವ್ಯಾಪಾರಿಗಳ ವಸ್ತುಗಳ ಮಾರಾಟ ಬೆಲೆ ಹೆಚ್ಚು ಮಾಡುತ್ತಾರೆ. ಏರಿಕೆ ಬಿಸಿ ಸಾಮಾನ್ಯರಿಗೆ ತಟ್ಟುತ್ತದೆ ಎಂದರು.ಇದನ್ನು ಆಕ್ಷೇಪಿಸಿದ ಅಬ್ದುಲ್ ರಹಿಮಾನ್ ಜಾತ್ರೆ ವ್ಯಾಪಾರಕ್ಕೆ ಬರುವವರು ಲಾಭಕ್ಕಾಗಿ ಬರುತ್ತಾರೆ. ಟೆಂಡರ್ ದರ ಇಳಿಕೆ ಬೇಡ ಎಂದರು.
ಪಟ್ಟಣ ಪಂಚಾಯತಿಯಲ್ಲಿ 22 ಜನ ವಾಲ್ವ್ ಮ್ಯಾನ್,ಪಂಪು ಚಾಲಕರು ಗೌರವಧನ ಆಧಾರದಲ್ಲಿ ಕಾರ್ಯನಿರ್ವಹಿಸುತ್ತಿದ್ದು ಇವರ ಸಂಖ್ಯೆಯನ್ನು ಹತ್ತಕ್ಕೆ ಇಳಿಸಿ ವೇತನ ಹೆಚ್ಚಿಸುವ ಕುರಿತು ನಿರ್ಣಯ ಕೈಗೊಳ್ಳಲಾಯಿತು. ವಿಟ್ಲದ ಟ್ರಾಫಿಕ್ ಜಾಮ್ ಸಮಸ್ಯೆ , ನೀರಿನ ಸಮಸ್ಯೆ ಒಳಗೊಂಡಂತೆ ಅಭಿವೃದ್ಧಿ ಪೂರಕ ಚರ್ಚೆಗಳು ನಡೆದವು.
ಪಟ್ಟಣ ಪಂಚಾಯತಿ ಉಪಾಧ್ಯಕ್ಷೆ ಸಂಗೀತಾ ಪಾಣೆಮಜಲು, ಸ್ಥಾಯಿ ಸಮಿತಿ ಅಧ್ಯಕ್ಷ ರವಿಪ್ರಕಾಶ್ ವಿಟ್ಲ , ಸದಸ್ಯರಾದ ಅಶೋಕ್ ಕುಮಾರ್ ಶೆಟ್ಟಿ, ಜಯಂತ್ ಗೌಡ, ವಸಂತ್, ಹರೀಶ್, ಅರುಣ್ ವಿಟ್ಲ, ರಕ್ಷಿತಾ, ಕೃಷ್ಣ ನಾಯ್ಕ್, ಅಬ್ದುಲ್ ರಹಿಮಾನ್ ಹಸೈನಾರ್ ನೆಲ್ಲಿಗುಡ್ಡೆ, ವಿಜಯಲಕ್ಷ್ಮೀ, ಸುನಿತಾ ಪೂಜಾರಿ, ಡೀಕಯ್ಯ, ಪದ್ಮಲತಾ, ಲತಾ ಅಶೋಕ್ ಪೂಜಾರಿ, ಶಾಕೀರಾ,ಪ್ರತಿಪಕ್ಷ ನಾಯಕ ವಿ. ಕೆ. ಎಂ. ಅಶ್ರಫ್,ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ಕರುಣಾಕರ ಕುಲಾಲ್, ನಾಮನಿರ್ದೇಶಿತ ಸದಸ್ಯರಾದ ಇಕ್ಬಾಲ್ ಹೋನೆಸ್ಟ್, ಕೊಲ್ಯ ಶ್ರೀನಿವಾಸ ಶೆಟ್ಟಿ ಹಾಗೂ ಸಿಬ್ಬಂದಿ ರತ್ನಾ ಮತ್ತಿತರರು ಉಪಸ್ಥಿತರಿದ್ದರು.



