Breaking
2 Aug 2026, Sun

127 ಲೋಡ್ ಅಕ್ರಮ ಮರಳು ವಶ; ಇಬ್ಬರ ವಿರುದ್ಧ ಪ್ರಕರಣ ದಾಖಲು

ಮಂಗಳೂರು: ಫಲ್ಗುಣಿ ನದಿಯಿಂದ ಅಕ್ರಮವಾಗಿ ಮರಳು ತೆಗೆದು ಮಾರಾಟ ಮಾಡಲು ದಾಸ್ತಾನು ಇಟ್ಟಿದ್ದ ಆರೋಪದಡಿ ಮೊಗರು ಗ್ರಾಮದ ಮಳಲಿ ಸಂಕೇಶ ನಿವಾಸಿಗಳಾದ ಅನ್ವಿತ್ ಮತ್ತು ರಾಜೇಂದ್ರ ಮೆಂಡಾ ವಿರುದ್ಧ ಬಜಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಖಚಿತ ಮಾಹಿತಿಯ ಮೇರೆಗೆ ಬಜಪೆ ಠಾಣಾಧಿಕಾರಿ ಬಾಲಕೃಷ್ಣ ನೇತೃತ್ವದಲ್ಲಿ ಪಂಚರ ಸಮಕ್ಷಮ ದಾಳಿ ನಡೆಸಿದ ವೇಳೆ ವಿವಿಧ ಸ್ಥಳಗಳಲ್ಲಿ ಅಕ್ರಮವಾಗಿ ಸಂಗ್ರಹಿಸಿಡಲಾಗಿದ್ದ ಒಟ್ಟು 127 ಲೋಡ್ ಮರಳನ್ನು ವಶಪಡಿಸಿಕೊಳ್ಳಲಾಗಿದೆ.

ದಾಳಿಯ ವೇಳೆ ಒಂದೇ ಸ್ಥಳದಲ್ಲಿ 20 ಲೋಡ್, ಮತ್ತೊಂದು ಗುಡ್ಡೆ ಪ್ರದೇಶದಲ್ಲಿ 50 ಲೋಡ್, ನಂತರ 5 ಲೋಡ್, 22 ಲೋಡ್ ಹಾಗೂ ಸೀತಾರಾಮ ಭಜನಾ ಮಂದಿರದ ಸಮೀಪ 30 ಲೋಡ್ ಮರಳು ಪತ್ತೆಯಾಗಿದೆ. ವಶಪಡಿಸಿಕೊಂಡ ಮರಳಿನ ಅಂದಾಜು ಮೌಲ್ಯ ಸುಮಾರು ₹6.35 ಲಕ್ಷ ಎಂದು ಪೊಲೀಸರು ತಿಳಿಸಿದ್ದಾರೆ.

ಆರೋಪಿಗಳು ಸರ್ಕಾರಕ್ಕೆ ರಾಜಧನ ಪಾವತಿಸದೇ ಫಲ್ಗುಣಿ ನದಿಯಿಂದ ಅಕ್ರಮವಾಗಿ ಮರಳು ಕಳವು ಮಾಡಿ, ಯಾವುದೇ ಪರವಾನಗಿ ಇಲ್ಲದೆ ಮಾರಾಟ ಮಾಡುವ ಉದ್ದೇಶದಿಂದ ದಾಸ್ತಾನು ಇಟ್ಟಿದ್ದರು ಎನ್ನಲಾಗಿದೆ. ಈ ಸಂಬಂಧ ಬಜಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.

Leave a Reply

Your email address will not be published. Required fields are marked *