ಮಣಿಪಾಲ: ಕುಂದಾಪುರ–ತೀರ್ಥಹಳ್ಳಿ ರಾಜ್ಯ ಹೆದ್ದಾರಿ 52ರ ಬಾಳೆಬರೆ (ಹುಲಿಕಲ್) ಘಾಟಿಯಲ್ಲಿ ಬಸ್ ಸೇರಿದಂತೆ ಪ್ರಯಾಣಿಕರ ವಾಹನಗಳು ಹಾಗೂ ಲಘು ಸರಕು ಸಾಗಣೆ ವಾಹನಗಳ ಸಂಚಾರಕ್ಕೆ ಮತ್ತೆ ಅವಕಾಶ ನೀಡಲಾಗಿದೆ.
ಘಾಟಿ ರಸ್ತೆಯ ಕಾಂಕ್ರೀಟ್ ಭಾಗದ ಕೆಳಭಾಗದಲ್ಲಿ ಮಣ್ಣು ಕುಸಿತ ಉಂಟಾದ ಹಿನ್ನೆಲೆಯಲ್ಲಿ ಎಲ್ಲಾ ಮಾದರಿಯ ವಾಹನಗಳ ಸಂಚಾರವನ್ನು ತಾತ್ಕಾಲಿಕವಾಗಿ ನಿಷೇಧಿಸಲಾಗಿತ್ತು. ಇದೀಗ ರಸ್ತೆ ಮಟ್ಟದವರೆಗೆ ತಡೆಗೋಡೆ ನಿರ್ಮಿಸಿ, ರಸ್ತೆಗೆ ಕಾಂಕ್ರೀಟ್ ಅಳವಡಿಸುವ ಕಾಮಗಾರಿ ಪೂರ್ಣಗೊಂಡಿರುವುದರಿಂದ ಸಂಚಾರಕ್ಕೆ ಅನುಮತಿ ನೀಡಲಾಗಿದೆ.

ಪ್ರಯಾಣಿಕರ ಅನುಕೂಲವನ್ನು ಗಮನದಲ್ಲಿಟ್ಟುಕೊಂಡು ಬಸ್, ಇತರ ಪ್ರಯಾಣಿಕರ ವಾಹನಗಳು ಹಾಗೂ ಲಘು ಗೂಡ್ಸ್ ವಾಹನಗಳ ಸಂಚಾರಕ್ಕೆ ಅವಕಾಶ ಕಲ್ಪಿಸಿ ಜಿಲ್ಲಾಧಿಕಾರಿ ಸ್ವರೂಪಾ ಟಿ.ಕೆ. ಆದೇಶ ಹೊರಡಿಸಿದ್ದಾರೆ.
ಈ ಕುರಿತು ಈಗಾಗಲೇ ಶಿವಮೊಗ್ಗ ಜಿಲ್ಲಾಧಿಕಾರಿ ಆದೇಶ ನೀಡಿದ್ದರೆ, ಉಡುಪಿ ಜಿಲ್ಲಾಡಳಿತವು ಹಿಂದೆ ಜಾರಿಗೊಳಿಸಿದ್ದ ವಾಹನ ಸಂಚಾರ ನಿಷೇಧ ಆದೇಶವನ್ನು ರದ್ದುಪಡಿಸಿ ಹೊಸ ಆದೇಶ ಹೊರಡಿಸಿದೆ.







