ಕಲ್ಲೇರಿ: ಬ್ಯಾಂಕ್ ಆಫ್ ಬರೋಡ ಪ್ರವರ್ತಿತ ವಿಜಯ ಗ್ರಾಮೀಣ ಅಭಿವೃದ್ಧಿ ಪ್ರತಿಷ್ಠಾನ, ಮಂಗಳೂರು ಹಾಗೂ ಭಾರತೀಯ ವಿಕಾಸ ಟ್ರಸ್ಟ್, ಮಣಿಪಾಲ ಇವರ ಜಂಟಿ ಆಶ್ರಯದಲ್ಲಿ ಆಯೋಜಿಸಲಾದ 15 ದಿನಗಳ ಉಚಿತ ಆರಿ ಕೌಶಲ್ಯ ತರಬೇತಿ ಕಾರ್ಯಕ್ರಮದ ಸಮಾರೋಪ ಸಮಾರಂಭವು ತಣ್ಣೀರುಪಂಥ ಹಾಲು ಉತ್ಪಾದಕರ ಸಂಘದ ಸಭಾಂಗಣದಲ್ಲಿ ನಡೆಯಿತು.

ಕಾರ್ಯಕ್ರಮದಲ್ಲಿ ಭಾರತೀಯ ವಿಕಾಸ ಟ್ರಸ್ಟ್‌ನ ಕಾರ್ಯಕ್ರಮ ವ್ಯವಸ್ಥಾಪಕರಾದ ಜೀವನ್ ಕೊಲ್ಯ ಮಾತನಾಡಿ, ಮಹಿಳೆಯರು ಕಾಲದ ಬೇಡಿಕೆಗೆ ಅನುಗುಣವಾಗಿ ವಿವಿಧ ಕೌಶಲ್ಯಗಳನ್ನು ಕಲಿತು ಸ್ವಉದ್ಯೋಗದಲ್ಲಿ ತೊಡಗಿಸಿಕೊಳ್ಳಬೇಕು. ಮನೆಯಲ್ಲಿಯೇ ಉದ್ಯೋಗ ನಿರ್ವಹಿಸಿ ಉತ್ತಮ ಆದಾಯ ಗಳಿಸುವ ಅವಕಾಶಗಳು ಇಂದು ಸಾಕಷ್ಟಿವೆ ಎಂದು ತಿಳಿಸಿದರು.
ವಿಜಯ ಗ್ರಾಮೀಣ ಅಭಿವೃದ್ಧಿ ಪ್ರತಿಷ್ಠಾನದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜ್ಯೋತಿರಾಜ್ ಅವರು ತರಬೇತಿಯಲ್ಲಿ ಭಾಗವಹಿಸಿದ ಮಹಿಳೆಯರ ಕೌಶಲ್ಯವನ್ನು ಶ್ಲಾಘಿಸಿ, ಸ್ವಉದ್ಯೋಗ ಆರಂಭಿಸಲು ಸಂಸ್ಥೆಯಿಂದ ಅಗತ್ಯ ಮಾರ್ಗದರ್ಶನ ಮತ್ತು ಸಹಕಾರ ದೊರೆಯಲಿದೆ ಎಂದು ಹೇಳಿದರು.

ಬೆಳ್ತಂಗಡಿ ತಾಲೂಕು ಅಮೂಲ್ಯ ಸಾಕ್ಷರತಾ ಸಮಾಲೋಚಕರಾದ ಉಷಾ ಕಾಮತ್ ಅವರು ತರಬೇತಿಯ ನಂತರ ಲಭ್ಯವಿರುವ ಉದ್ಯೋಗಾವಕಾಶಗಳು ಹಾಗೂ ಬ್ಯಾಂಕ್‌ಗಳ ಸಾಲ ಸೌಲಭ್ಯಗಳ ಕುರಿತು ಮಾಹಿತಿ ನೀಡಿದರು.
ಸಂಪನ್ಮೂಲ ವ್ಯಕ್ತಿ ದೀಕ್ಷಾ ಅವರು ತರಬೇತಿ ನೀಡಿದ ಅನುಭವವನ್ನು ಹಂಚಿಕೊಂಡರೆ, ಹೊಲಿಗೆ ತರಬೇತಿ ಕೇಂದ್ರದ ಶಿಕ್ಷಕಿ ಶ್ರೀಮತಿ ಮೀನಾಕ್ಷಿ, ತರಬೇತುದಾರರಾದ ಶ್ರೀಮತಿ ಅಕ್ಷಿತಾ ಹಾಗೂ ತಣ್ಣೀರು ಪಂಥ ಹಾಲು ಸೊಸೈಟಿಯ ಕಾರ್ಯದರ್ಶಿ ಜಯರಾಜ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ತರಬೇತಿಯಲ್ಲಿ ಭಾಗವಹಿಸಿದ ಮಹಿಳೆಯರು ತಮ್ಮ ಅನುಭವ ಮತ್ತು ಅನಿಸಿಕೆಗಳನ್ನು ಹಂಚಿಕೊಂಡರು. ಕಾರ್ಯಕ್ರಮದ ಅಂತ್ಯದಲ್ಲಿ ಯಶಸ್ವಿಯಾಗಿ ತರಬೇತಿ ಪೂರ್ಣಗೊಳಿಸಿದ ಮಹಿಳೆಯರಿಗೆ ಪ್ರಮಾಣಪತ್ರಗಳನ್ನು ವಿತರಿಸಲಾಯಿತು.
ಗುಣವತಿ ಕಾರ್ಯಕ್ರಮ ನಿರೂಪಿಸಿದರು. ಮಲ್ಲಿಕಾ ಸ್ವಾಗತಿಸಿ, ವಿನೋದಾ ವಂದಿಸಿದರು.





