Breaking
17 Jun 2026, Wed

ಕನ್ಯಾಡಿಯಲ್ಲಿ ಮಹಿಳೆಯರಿಗಾಗಿ ಉಚಿತ ಫ್ಯಾಬ್ರಿಕ್ ಪೈಂಟ್ ಡಿಸೈನ್ ತರಬೇತಿ ಶಿಬಿರಕ್ಕೆ ಚಾಲನೆ

ಕನ್ಯಾಡಿ: ಸೇವಾಭಾರತಿ (ರಿ.), ಕನ್ಯಾಡಿ ಇದರ ನೇತೃತ್ವದಲ್ಲಿ ಸಬಲಿನಿ ಯೋಜನೆಯಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ (ನಿ.), ಧರ್ಮಸ್ಥಳ ಹಾಗೂ ಶ್ರೀ ದುರ್ಗಾ ಮಾತೃ ಮಂಡಳಿ, ಕನ್ಯಾಡಿ ಇವರ ಸಹಭಾಗಿತ್ವದಲ್ಲಿ ಮಹಿಳೆಯರಿಗಾಗಿ ಒಂದು ತಿಂಗಳ ಉಚಿತ ಫ್ಯಾಬ್ರಿಕ್ ಪೈಂಟ್ ಡಿಸೈನ್ ತರಬೇತಿ ಶಿಬಿರದ ಉದ್ಘಾಟನಾ ಸಮಾರಂಭವು ಜೂನ್ 15ರಂದು ಕನ್ಯಾಡಿ ಸೇವಾನಿಕೇತನದಲ್ಲಿ ನಡೆಯಿತು.

ಕಾರ್ಯಕ್ರಮವನ್ನು ಧರ್ಮಸ್ಥಳ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ನಿರ್ದೇಶಕರಾದ ನೀಲಕಂಠ ಶೆಟ್ಟಿ ಉದ್ಘಾಟಿಸಿ, ಫ್ಯಾಬ್ರಿಕ್ ಪೈಂಟ್ ಡಿಸೈನ್ ಕೇವಲ ಕಲೆಯಲ್ಲ, ಸ್ವಯಂ ಉದ್ಯೋಗ ಮತ್ತು ಆರ್ಥಿಕ ಸಬಲೀಕರಣಕ್ಕೆ ಉತ್ತಮ ಅವಕಾಶವಾಗಿದೆ. ತರಬೇತಿಯ ಮೂಲಕ ಮಹಿಳೆಯರು ಹೊಸ ಕೌಶಲ್ಯಗಳನ್ನು ಅಳವಡಿಸಿಕೊಂಡು ತಮ್ಮ ಪ್ರತಿಭೆಯನ್ನು ಅಭಿವೃದ್ಧಿಪಡಿಸಿಕೊಳ್ಳಬೇಕು ಎಂದು ಶುಭ ಹಾರೈಸಿದರು.

ಸೇವಾಭಾರತಿ ಅಧ್ಯಕ್ಷ ಹಾಗೂ ಸೇವಾಧಾಮ ಸಂಸ್ಥಾಪಕರಾದ ವಿನಾಯಕ ರಾವ್ ಪ್ರಾಸ್ತಾವಿಕವಾಗಿ ಮಾತನಾಡಿ, ಯಶಸ್ಸಿಗೆ ದೊಡ್ಡ ಅವಕಾಶಗಳ ಅಗತ್ಯವಿಲ್ಲ; ಕಲಿಯುವ ಮನೋಭಾವ ಮತ್ತು ಹೊಸ ವಿಷಯಗಳನ್ನು ತಿಳಿದುಕೊಳ್ಳುವ ಆಸಕ್ತಿ ಇದ್ದರೆ ಸಾಕು. ಇಂತಹ ತರಬೇತಿಗಳು ಪ್ರತಿಭೆಯನ್ನು ಗುರುತಿಸಿ ಬೆಳೆಸಿಕೊಳ್ಳಲು ಹಾಗೂ ಜೀವನದಲ್ಲಿ ಹೊಸ ಅವಕಾಶಗಳನ್ನು ಸೃಷ್ಟಿಸಿಕೊಳ್ಳಲು ಸಹಕಾರಿಯಾಗುತ್ತವೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಮಂಗಳೂರು ವಿಭಾಗದ ರಾಷ್ಟ್ರೀಯ ಸ್ವಯಂಸೇವಕ ಸಂಘದ ಘುಮಂತು ಕಾರ್ಯ ವಿಭಾಗ ಪ್ರಮುಖ ಸುದರ್ಶನ್ ಕೆ.ವಿ., ಉದ್ಯಮಿ ಸ್ವಾತಿ ವಿಶ್ವಜಿತ್, ಕನ್ಯಾಡಿ ಶ್ರೀ ದುರ್ಗಾ ಮಾತೃ ಮಂಡಳಿಯ ಅಧ್ಯಕ್ಷೆ ಮಮತಾ ಬಿ. ಹಾಗೂ ಫ್ಯಾಷನ್ ಡಿಸೈನರ್ ಮತ್ತು ತರಬೇತುದಾರರಾದ ಭವ್ಯಶ್ರೀ ಕೀರ್ತಿರಾಜ್ ಉಪಸ್ಥಿತರಿದ್ದರು.

ಶಿಬಿರದಲ್ಲಿ ಒಟ್ಟು 20 ಮಹಿಳಾ ಶಿಬಿರಾರ್ಥಿಗಳು ಭಾಗವಹಿಸಿದ್ದರು. ಶ್ರೀ ದುರ್ಗಾ ಮಾತೃ ಮಂಡಳಿಯ ಸದಸ್ಯೆ ಸವಿತಾ ಎಂ. ರಾವ್ ಸ್ವಾಗತಿಸಿದರು. ಕಾರ್ಯದರ್ಶಿ ಚಂದ್ರಾವತಿ ಕಾರ್ಯಕ್ರಮ ನಿರೂಪಿಸಿದರು, ಸೇವಾಭಾರತಿ ಡಾಕ್ಯುಮೆಂಟೇಷನ್ ಮಾನಿಟರಿಂಗ್ ಮತ್ತು ಇವಾಲ್ಯುಯೇಷನ್ ಸಂಯೋಜಕಿ ಕು. ಸುಮಾ ವಂದಿಸಿದರು.

Leave a Reply

Your email address will not be published. Required fields are marked *