ದಾವಣಗೆರೆ: ಮಾವನ ಜೊತೆ ಜೇನು ತೆಗೆಯಲು ತೆರಳಿದ್ದ 7 ವರ್ಷದ ಬಾಲಕನ ಮೃತದೇಹ ಪತ್ತೆಯಾಗಿರುವ ಘಟನೆ ದಾವಣಗೆರೆ ಜಿಲ್ಲೆಯ ಜಗಳೂರು ತಾಲೂಕಿನ ಗ್ರಾಮವೊಂದರಲ್ಲಿ ನಡೆದಿದೆ.
ಮೃತ ಬಾಲಕನನ್ನು ಶಶಿನಾಯ್ಕ್ ಅವರ ಪುತ್ರ ಆದಿತ್ಯ (7) ಎಂದು ಗುರುತಿಸಲಾಗಿದೆ.

ಬುಧವಾರ ಬೆಳಗ್ಗೆ ಆದಿತ್ಯ ತನ್ನ ಮಾವ ತಾವರೆ ನಾಯ್ಕ್ ಜೊತೆ ಜೇನು ತೆಗೆಯಲು ತೆರಳಿದ್ದ ಸಂಜೆ ಆದರೂ ಇಬ್ಬರೂ ಮನೆಗೆ ಮರಳದ ಹಿನ್ನೆಲೆಯಲ್ಲಿ ಕುಟುಂಬಸ್ಥರು ಪೊಲೀಸ್ ಠಾಣೆಯಲ್ಲಿ ನಾಪತ್ತೆ ದೂರು ದಾಖಲಿಸಿದ್ದರು.
ಇಂದು ಬೆಳಗ್ಗೆ ಗ್ರಾಮದ ಸಮೀಪದ ಹಳ್ಳದಲ್ಲಿ ಆದಿತ್ಯನ ಮೃತದೇಹ ಪತ್ತೆಯಾಗಿದೆ. ಬಾಲಕನ ಸಾವಿನ ಸುತ್ತ ಹಲವು ಅನುಮಾನಗಳು ಮೂಡಿದ್ದು, ಮಾವ ತಾವರೆ ನಾಯ್ಕ್ ಮೇಲೆಯೇ ಕುಟುಂಬಸ್ಥರು ಶಂಕೆ ವ್ಯಕ್ತಪಡಿಸಿದ್ದಾರೆ.

ಘಟನೆಯ ಬಳಿಕ ತಾವರೆ ನಾಯ್ಕ್ ನಾಪತ್ತೆಯಾಗಿರುವುದರಿಂದ ಪೊಲೀಸರು ಆತನಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ಬಾಲಕನ ಸಾವಿಗೆ ನಿಖರ ಕಾರಣವೇನು ಎಂಬುದು ಮರಣೋತ್ತರ ಪರೀಕ್ಷೆ ಹಾಗೂ ತನಿಖೆಯ ಬಳಿಕವೇ ಸ್ಪಷ್ಟವಾಗಲಿದೆ.
ಈ ಸಂಬಂಧ ಜಗಳೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.






