ಬೆಳಾಲು: ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಬೆಳಾಲು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಅನುದಾನಿತ ಪ್ರೌಢ ಶಾಲೆಯಲ್ಲಿ ಜೂ.5 ರಂದು ವಿಶ್ವ ಪರಿಸರ ದಿನಾಚರಣೆ ಆಚರಿಸಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲೆಯ ಮುಖ್ಯೋಪಾಧ್ಯಾಯ ಜಯರಾಮ ಮಯ್ಯ ವಹಿಸಿ, ಭಿತ್ತಿಪತ್ರಿಕೆಯನ್ನು ಅನಾವರಣಗೊಳಿಸಿದರು. ಬಳಿಕ ಮಾತನಾಡಿದ ಅವರು, ಪರಿಸರ ಸಂರಕ್ಷಣೆಯಲ್ಲಿ ವಿದ್ಯಾರ್ಥಿಗಳ ಪಾತ್ರ ಮಹತ್ವದ್ದಾಗಿದ್ದು ಎಂದು ತಿಳಿಸಿದರು.

ಶಿಕ್ಷಕಿ ಕೋಕಿಲ ಪರಿಸರ ದಿನಾಚರಣೆಗೆ ಸಂಬಂಧಿಸಿದ ರಸಪ್ರಶ್ನೆ ಕಾರ್ಯಕ್ರಮ ನಡೆಸಿಕೊಟ್ಟರು. ವಿದ್ಯಾರ್ಥಿ ಪ್ರಣಮ್ ವಿಶ್ವ ಪರಿಸರ ದಿನದ ವಿಶೇಷತೆಯ ಕುರಿತು ಮಾತನಾಡಿದರು. ವಿದ್ಯಾರ್ಥಿಗಳು ಪರಿಸರ ಗೀತೆಗಳನ್ನು ಹಾಡುವ ಮೂಲಕ ಕಾರ್ಯಕ್ರಮಕ್ಕೆ ಮೆರುಗು ತಂದರು.

ಈ ಸಂದರ್ಭದಲ್ಲಿ ಪರಿಸರ ಸಂರಕ್ಷಣೆಯ ಕುರಿತು ಜಾಗೃತಿ ಮೂಡಿಸುವ ವಿಡಿಯೋ ತುಣುಕನ್ನು ಪ್ರದರ್ಶಿಸಲಾಯಿತು. ಶಾಲಾ ಆವರಣದಲ್ಲಿ ಗಿಡ ನೆಡುವ ಕಾರ್ಯಕ್ರಮವೂ ನಡೆಯಿತು. ವಿದ್ಯಾರ್ಥಿನಿ ಫಾತಿಮತ್ ಸಫೀರ ಕಾರ್ಯಕ್ರಮ ನಿರೂಪಿಸಿದರು.




