ಮೈಸೂರು: ಸರ್ವಕಲಾ ಸೇವಾ ಟ್ರಸ್ಟ್ ಹಾಗೂ ಪಂಚಾಯತ್ ಗ್ರಾಮೀಣಾಭಿವೃದ್ಧಿ ರೈತರ ಸೇವಾ ಸಮಿತಿ (ರಿ.) ಮೈಸೂರು ಜಿಲ್ಲಾ ಘಟಕದ ವತಿಯಿಂದ ಆಯೋಜಿಸಲಾದ ರಾಷ್ಟ್ರಮಟ್ಟದ ಸುಗ್ಗಿಯರ ಕಲೋತ್ಸವ ಗಾಯನ ಸೀಸನ್–3 ಕಾರ್ಯಕ್ರಮವು ನಗರದ ಹೂಟಗಳ್ಳಿ ಹೌಸಿಂಗ್ ಬೋರ್ಡ್‌ನ ಶ್ರೀ ಅನಂತೇಶ್ವರ ಭವನದಲ್ಲಿ ಅದ್ಧೂರಿಯಾಗಿ ನಡೆಯಿತು.
ಕಾರ್ಯಕ್ರಮವು ಪರಮಪೂಜ್ಯ ಶ್ರೀನಿವಾಸನ್ ಎನ್. ಸ್ವಾಮೀಜಿ ಹಾಗೂ ಶ್ರೀ ಶ್ರೀ ರಮಾನಂದ ಗುರೂಜಿ ಅವರ ದಿವ್ಯ ಸಾನ್ನಿಧ್ಯದಲ್ಲಿ ನೆರವೇರಿತು.

ಆಶೀರ್ವಚನ ನೀಡಿದ ಅವರು, ಸಂಗೀತ ಮತ್ತು ಕಲೆಗಳು ಸಮಾಜದಲ್ಲಿ ಮಾನವೀಯ ಮೌಲ್ಯಗಳನ್ನು ಬೆಳೆಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ ಎಂದು ಅಭಿಪ್ರಾಯಪಟ್ಟರು. ಗ್ರಾಮೀಣ ಭಾಗದ ಯುವ ಪ್ರತಿಭೆಗಳಿಗೆ ವೇದಿಕೆ ಕಲ್ಪಿಸುವ ಉದ್ದೇಶದಿಂದ ಇಂತಹ ಕಾರ್ಯಕ್ರಮಗಳನ್ನು ಆಯೋಜಿಸುವುದು ಶ್ಲಾಘನೀಯ ಎಂದು ತಿಳಿಸಿದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಜಿ.ಟಿ. ದೇವೇಗೌಡ ಅವರು, ರಕ್ತದಾನಿ ಮಂಜು ಅವರ ಕನಸಿನ ಯೋಜನೆಯಾದ ಚಿರಜೀವ ಸೇವಾ ಟ್ರಸ್ಟ್ ಹಾಗೂ ನೀಮಾ ಲೋಬೋ ಅವರ ಸಪ್ತಸ್ವರ ಮೆಲೋಡಿಸ್ ಸಂಸ್ಥೆಯ ಪೋಸ್ಟರ್ ಅನ್ನು ಗಣ್ಯರೊಂದಿಗೆ ಉದ್ಘಾಟಿಸಿದರು.
ಈ ವೇಳೆ ಮಾತನಾಡಿದ ಅವರು, ಗ್ರಾಮೀಣ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸುವ ಕಾರ್ಯಕ್ರಮಗಳು ಸಮಾಜದ ಸಾಂಸ್ಕೃತಿಕ ಬೆಳವಣಿಗೆಗೆ ಪೂರಕವಾಗಿವೆ ಎಂದರು.

ಕನ್ನಡ ಚಿತ್ರರಂಗದ ಖ್ಯಾತ ಹಾಸ್ಯ ನಟ ಮಂಗಳಗೌರಿ ಮುರುಳೀಧರ್ ವಿಶೇಷ ಆಹ್ವಾನಿತರಾಗಿ ಭಾಗವಹಿಸಿ ತಮ್ಮ ಹಾಸ್ಯಮಯ ಮಾತುಗಳ ಮೂಲಕ ಸಭಿಕರನ್ನು ರಂಜಿಸಿದರು. ಜೊತೆಗೆ ಯುವ ಕಲಾವಿದರಿಗೆ ಪ್ರೋತ್ಸಾಹದ ಮಾತುಗಳನ್ನಾಡಿದರು.
ರಾಜ್ಯದ ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ ಗಾಯನ ಪ್ರತಿಭೆಗಳು ಭಕ್ತಿಗೀತೆ, ಭಾವಗೀತೆ, ಜನಪದ ಗೀತೆ ಹಾಗೂ ಚಲನಚಿತ್ರ ಗೀತೆಗಳನ್ನು ಪ್ರಸ್ತುತಪಡಿಸಿ ಪ್ರೇಕ್ಷಕರ ಮನಗೆದ್ದರು.
ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಗಣ್ಯರನ್ನು ಸನ್ಮಾನಿಸಿ ಗೌರವಿಸಲಾಯಿತು. ಗಾಯನ ಸ್ಪರ್ಧೆಗಳಲ್ಲಿ ವಿಜೇತರಾದ ಪ್ರತಿಭೆಗಳಿಗೆ ಟ್ರೋಫಿ, ಪ್ರಶಸ್ತಿ ಪತ್ರ ಹಾಗೂ ಸ್ಮರಣಿಕೆಗಳನ್ನು ವಿತರಿಸಲಾಯಿತು.

ಸಮಾರಂಭದಲ್ಲಿ ಮಹಾದೇವಸ್ವಾಮಿ, ದಾಸೇಗೌಡ, ಸುಧಾಮಣಿ, ಯಮನ ಹೆಚ್.ಎಲ್., ನೀಮಾ ಲೋಬೋ, ಚಂದ್ರಿಕಾ ಸುರೇಶ್, ಭಾಗ್ಯ ತಿಮ್ಮರಾಜೇಗೌಡ, ಭಾಗ್ಯ ಲೋಕೇಶ್, ನಾಗರತ್ನ ರಮೇಶ್, ಭಾಗ್ಯ ಮೋಹನ್, ಡಾ. ನಾಗರಾಜು ವಿ. ಭೈರಿ, ಶ್ರೀನಿವಾಸ್ ರಾವ್, ಎಂ.ಜೆ. ಕಿರಣ್ ಗೌಡ, ಪುರುಷೋತ್ತಮ ಕೆ.ಎಸ್., ಬಿ.ಪಿ. ಸಂದೇಶ್, ವಿ.ಕೆ. ದಿವ್ಯಾ, ರಾಜಶೇಖರ್, ಯಾದವ್ ಹರೀಶ್, ದಿನೇಶ್, ಪ್ರಶಾಂತ್ ಅರುಣ್‌ಪುರ, ವಿಕ್ರಂ ಅಯ್ಯಂಗಾರ್, ನಾಗೇಂದ್ರ, ಪ್ರದೀಪ್ ಕುಮಾರ್, ಗಿರೀಶ್ ಎಸ್.ಆರ್., ಲತಾ ದೊರೆಸ್ವಾಮಿ, ಶೈಲಜಾ ವಿ., ಭೈರ ಹೆಚ್.ಆರ್., ಡಾ. ಲಯನ್ ಕುಮಾರ್, ಸುರೇಶ್ ಹಾಗೂ ಸವಿತಾ ಎಸ್. ಗೌಡ ಸೇರಿದಂತೆ ಹಲವಾರು ಗಣ್ಯರು ಉಪಸ್ಥಿತರಿದ್ದರು.

ಶ್ರೀಮತಿ ನೀಮಾ ಲೋಬೋ, ಡಾ. ಜೋಸೆಫ್ ಲೋಬೋ, ಯಾದವ್ ಹರೀಶ್ ಹಾಗೂ ಪಿಜಿಆರ್‌ಎಸ್‌ಎಸ್‌ನ ರಕ್ತದಾನಿ ಮಂಜು ಅವರ ನೇತೃತ್ವದಲ್ಲಿ ಆಯೋಜಿಸಲಾದ ಈ ಕಲೋತ್ಸವವು ನೂರಾರು ಕಲಾಭಿಮಾನಿಗಳು, ಕಲಾವಿದರು ಹಾಗೂ ಸಾರ್ವಜನಿಕರ ಸಮ್ಮುಖದಲ್ಲಿ ಯಶಸ್ವಿಯಾಗಿ ನೆರವೇರಿತು. ಗ್ರಾಮೀಣ ಪ್ರತಿಭೆಗಳ ಅನಾವರಣಕ್ಕೆ ಇದು ಪರಿಣಾಮಕಾರಿ ವೇದಿಕೆಯಾಗಿ ಪರಿಣಮಿಸಿತು.

