ಬಂಟ್ವಾಳ: ಆಹಾರ, ನಾಗರಿಕ ಸರಬುರಾಜು ಇಲಾಖೆ ವತಿಯಿಂದ ನ್ಯಾಯಬೆಲೆ ಅಂಗಡಿಗಳ ಮೂಲಕ ವಿತರಣೆ ಮಾಡುತ್ತಿರುವ ಪಡಿತರ ಅಕ್ಕಿಯು ಸರ್ವರ್ ಸಮಸ್ಯೆಯಿಂದಾಗಿ ಗ್ರಾಹಕರಿಗೆ ಸರಿಯಾಗಿ ತಲುಪದೇ ತುಂಬಾ ಅಡಚಣೆಯಾಗುತ್ತಿದೆ. ಈ ಸರ್ವರ್ ತೊಂದರೆಯಿಂದ ಗ್ರಾಹಕರು ತಮ್ಮ ಪಡಿತರ ಅಕ್ಕಿ ಪಡೆಯಲು ಸಂಬಂಧ ಪಟ್ಟ ನ್ಯಾಯಬೆಲೆ ಅಂಗಡಿಗಳಲ್ಲಿ ದಿನಾ ಪೂರ್ತಿಯಾಗಿ ಕಾಯುವ ಪರಿಸ್ಥಿತಿ ನಿರ್ಮಾಣಗೊಂಡಿದೆ.

ಕೆಲವೊಂದು ಕಡೆಗಳಲ್ಲಿ ದಿನಾ ಪೂರ್ತಿ ಕಾದು ನಿಂತರೂ ಸರ್ವರ್ ಸಮಸ್ಯೆಯಿಂದ ಅಕ್ಕಿ ಲಭಿಸದೆ ಮನೆಗೆ ವಾಪಾಸ್ ಹೋಗುತ್ತಿದ್ದಾರೆ.ಸರಕಾರದ ಮಟ್ಟದಲ್ಲಿನ ಈ ರೀತಿಯ ತಾಂತ್ರಿಕ ಅಡಚಣೆಯಿಂದಾಗಿ ಕೂಲಿ ಕೆಲಸ ಮಾಡುತ್ತಿರುವ ಬಿಪಿಎಲ್ ಪಡಿತರ ಚೀಟಿದಾರ ಗ್ರಾಹಕರು ಸಕಾಲದಲ್ಲಿ ಅಕ್ಕಿ ಸಿಗದೆ ನ್ಯಾಯಬೆಲೆ ಅಂಗಡಿ ಸಿಬ್ಬಂದಿಗಳನ್ನು ತರಾಟೆಗೆ ತೆಗೆದು ಕೊಳ್ಳುತ್ತಿರುವುದು ಕಂಡು ಬಂದಿದೆ.

ಸಂಬಂಧ ಪಟ್ಟ ಆಹಾರ ಅಧಿಕಾರಿಗಳಲ್ಲಿ ವಿಚಾರಿಸಿದರೆ ಎರಡು ತಿಂಗಳ ಅಕ್ಕಿಯನ್ನು ಒಂದೇ ತಿಂಗಳಿನಲ್ಲಿ ನೀಡುತ್ತಿರುವುದರಿಂದ ಸರ್ವರ್ ಸಮಸ್ಯೆ ಉದ್ಭವಿಸಿದೆ ಎಂದೂ ಉತ್ತರ ನೀಡುತ್ತಿದ್ದು ಸಮರ್ಪಕ ಕಾರಣ ತಿಳಿಯುತ್ತಿಲ್ಲ. ಈ ಸರ್ವರ್ ಸಮಸ್ಯೆ ತಿಂಗಳ ಅಂತ್ಯವರೆಗೂ ಹೀಗೆಯೇ ಮುಂದುವರಿದರೆ ಕೆಲವರು ಪಡಿತರ ಅಕ್ಕಿ ಪಡೆಯುವಲ್ಲಿ ವಂಚಿತರಾಗಬಹುದು.

ಈ ಹಿನ್ನೆಲೆಯಲ್ಲಿ ಮೇ ತಿಂಗಳ ಪಡಿತರ ಅಕ್ಕಿಯನ್ನು ಜೂನ್ ಮೊದಲ ವಾರದವರೆಗೂ ನೀಡಲು ಸೂಕ್ತ ಆದೇಶ ನೀಡಬೇಕು ಎಂದು ಈ ಮೂಲಕ ಮಾನ್ಯ ಆಯುಕ್ತರು ಆಹಾರ, ನಾಗರಿಕ ಸರಬುರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಗೆ ಪ್ರಭಾಕರ ಪ್ರಭು ಮಾಜಿ ಸದಸ್ಯರು, ಬಂಟ್ವಾಳ ತಾಲೂಕು ಪಂಚಾಯತ್ ಅವರು ಒತ್ತಾಯ ಮಾಡಿದ್ದಾರೆ.


