Breaking
28 May 2026, Thu

ಬಂಟ್ವಾಳ ತಾಲೂಕು ಗಮಕ ಕಲಾ ಪರಿಷತ್ತು ನೂತನ ಪದಾಧಿಕಾರಿಗಳ ಪದಗ್ರಹಣ

ಬಂಟ್ವಾಳ: ಕರ್ನಾಟಕ ಗಮಕ ಕಲಾ ಪರಿಷತ್ತು ರೀ. ಬೆಂಗಳೂರು, ದಕ್ಷಿಣ ಕನ್ನಡ ಜಿಲ್ಲಾ ಕರ್ನಾಟಕ ಗಮಕ ಕಲಾ ಪರಿಷತ್ತು ಆಶ್ರಯದಲ್ಲಿ ಕರ್ನಾಟಕ ಗಮಕ ಕಲಾ ಪರಿಷತ್ತು ಬಂಟ್ವಾಳ ತಾಲೂಕು ಘಟಕದ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭವು ಪಾಣೆಮಂಗಳೂರಿನ ಶ್ರೀ ಭಯಂಕೇಶ್ವರ ಸದಾಶಿವ ದೇವಸ್ಥಾನದಲ್ಲಿ ನಡೆಯಿತು.

ತಾಲೂಕು ಘಟಕದ ಅಧ್ಯಕ್ಷ ಕೆಯ್ಯೂರು ನಾರಾಯಣ ಭಟ್ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮವನ್ನು ನಿವೃತ್ತ ಪ್ರಾಧ್ಯಾಪಕ ಎಚ್.ಎನ್. ಹೆಬ್ಬಾರ್ ದೀಪ ಬೆಳಗಿಸಿ ಗಮಕ ವಾಚನದ ಮೂಲಕ ಉದ್ಘಾಟಿಸಿದರು. ಜಿಲ್ಲಾ ಘಟಕದ ಅಧ್ಯಕ್ಷ ಪ್ರೊಫೆಸರ್ ಮದ್ದೂರು ಮೋಹನ ಕಲ್ಲೂರಾಯ ನೂತನ ಪದಾಧಿಕಾರಿಗಳಿಗೆ ಅಧಿಕಾರ ಹಸ್ತಾಂತರ ನೆರವೇರಿಸಿದರು.

ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಬಿ. ರಘುನಾಥ ಸೋಮಯಾಜಿ ಶುಭ ಹಾರೈಸಿದರು. ಸಜೀಪ ಮಾಗಣೆ ತಂತ್ರಿ ಭಾರತೀಯ 64 ಕಲೆಗಳಲ್ಲಿ ಒಂದಾದ ಗಮಕ ಕಲೆ ಮನೆಮನೆಗಳಲ್ಲಿ ನಡೆಯುವಂತಾಗಲಿ ಎಂದು ಆಶಿಸಿದರು.

ಕಾಲೇಜು ಪ್ರಾಚಾರ್ಯ ಡಾ. ಗಿರೀಶ್ ಭಟ್ ಅಜೆಕಳ ಮಾತನಾಡಿ, “ಹಿಂದೆ ರಾಜಾಶ್ರಯದಿಂದ ಗೌರವಿಸಲ್ಪಡುತ್ತಿದ್ದ ಗಮಕ ಕಲೆ ಇಂದು ಜನಾಶ್ರಯದಿಂದ ಮುಂದಿನ ಪೀಳಿಗೆಗೆ ತಲುಪುತ್ತಿದೆ. ಇಂತಹ ಕಾರ್ಯಕ್ರಮಗಳು ಗಮಕ ಪರಂಪರೆಯ ಉಳಿವಿಗೆ ಸಹಕಾರಿ,” ಎಂದರು.

ನೂತನ ಕಾರ್ಯದರ್ಶಿ ನ್ಯಾಯವಾದಿ ರವೀಂದ್ರ ಕುಕ್ಕಾಜೆ ಕಾರ್ಯಕ್ರಮಗಳ ವಿವರ ನೀಡಿದರು. ನೂತನ ಅಧ್ಯಕ್ಷ ಎ. ರವಿಶಂಕರ ಮೈಯ್ಯ ಮಾತನಾಡಿ, ಬಂಟ್ವಾಳ ತಾಲೂಕಿನ ಮೂಲೆಮೂಲೆಗೂ ಗಮಕ ಕಾರ್ಯಕ್ರಮಗಳನ್ನು ಕೊಂಡೊಯ್ಯಲು ಎಲ್ಲರೂ ಸಹಕರಿಸಬೇಕೆಂದು ವಿನಂತಿಸಿದರು.

ಕಾರ್ಯಕ್ರಮದಲ್ಲಿ “ನಮೋ ಕುಮಾರವ್ಯಾಸ” ಗಮಕಗೀತೆ ಹಾಗೂ ಕನಕದಾಸರ ದಾಸ ಸಾಹಿತ್ಯ ಗಮಕ ವಾಚನವನ್ನು ಹಿರಿಯ ಮತ್ತು ಕಿರಿಯ ಗಮಕಿಗಳು ನಡೆಸಲಾಯಿತು.
“ಭೀಮಾಂಜನೇಯ ಸಮಾಗಮ – ಸೌಗಂಧಿಕಾ ಸಂಧಿ” ಭಾಗವನ್ನು ಮಂಜುಳಾ ಸುಬ್ರಮಣ್ಯ ಭಟ್ ಗಮಕಿಯಾಗಿ, ಪ್ರೊಫೆಸರ್ ಮದ್ದೂರು ಮೋಹನ ಕಲ್ಲೂರಾಯ ವ್ಯಾಖ್ಯಾನಕಾರರಾಗಿ ನಿರ್ವಹಿಸಿ ಕಾರ್ಯಕ್ರಮಕ್ಕೆ ವಿಶೇಷ ಮೆರುಗು ತಂದರು.

Leave a Reply

Your email address will not be published. Required fields are marked *