Breaking
13 Jul 2026, Mon

ಉಡುಪಿ: ಕಿನ್ನಿಮೂಲ್ಕಿ ಬಳಿ ಚಲಿಸುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್‌ನ ಸ್ಟಬ್ ಆ್ಯಕ್ಸಲ್ ಮುರಿದು ಕಳಚಿದ ಟಯರ್

ಉಡುಪಿ: ಕಿನ್ನಿಮೂಲ್ಕಿ ಸಮೀಪದ ಉಡುಪಿ ಸ್ವಾಗತ ಗೋಪುರದ ಬಳಿ ಚಲಿಸುತ್ತಿದ್ದ ಸರ್ಕಾರಿ ಬಸ್ಸೊಂದರ ಎಡಭಾಗದ ಸ್ಟಬ್ ಆ್ಯಕ್ಸಲ್ ಮುರಿದು ಟಯರ್ ಕಳಚಿ ಬಿದ್ದ ಪರಿಣಾಮ, ಬಸ್ ರಸ್ತೆಯಲ್ಲೇ ಎಡಕ್ಕೆ ವಾಲಿ ನಿಂತ ಘಟನೆ ನಡೆದಿದೆ.

ಮಂಗಳೂರಿನಿಂದ ಬೆಳಗಾವಿ ಜಿಲ್ಲೆಯ ಅಂಕಲಗಿಗೆ ತೆರಳುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್ ಕಿನ್ನಿಮೂಲ್ಕಿಯ ಉಡುಪಿ ಪ್ರವೇಶ ದ್ವಾರದ ಬಳಿ ತಲುಪುತ್ತಿದ್ದಂತೆ, ಟಯರ್ ಒಂದು ಕಡೆಗೆ ವಾಲುತ್ತಿರುವುದನ್ನು ಚಾಲಕ ಗಮನಿಸಿದ್ದಾರೆ. ತಕ್ಷಣ ಬಸ್ಸನ್ನು ನಿಲ್ಲಿಸಲು ಪ್ರಯತ್ನಿಸಿದರೂ, ಈಗಾಗಲೇ ಬಿರುಕು ಬಿಟ್ಟಿದ್ದ ಸ್ಟಬ್ ಆ್ಯಕ್ಸಲ್ ಸಂಪೂರ್ಣವಾಗಿ ಮುರಿದು ಟಯರ್ ವಾಹನದಿಂದ ಕಳಚಿ ಹೊರಗೆ ಬಿದ್ದಿದೆ. ಪರಿಣಾಮ ಬಸ್ ರಸ್ತೆಯಲ್ಲೇ ಎಡಭಾಗಕ್ಕೆ ವಾಲಿ ನಿಂತಿದೆ.

ಅದೃಷ್ಟವಶಾತ್ ಬಸ್ಸಿನಲ್ಲಿದ್ದ ಎಲ್ಲಾ ಪ್ರಯಾಣಿಕರು ಯಾವುದೇ ಗಾಯಗಳಿಲ್ಲದೆ ಸುರಕ್ಷಿತವಾಗಿ ಪಾರಾಗಿದ್ದಾರೆ. ಘಟನೆ ನಡೆದ ಅರ್ಧ ಗಂಟೆಯೊಳಗೆ ಕೆಎಸ್‌ಆರ್‌ಟಿಸಿ ಅಧಿಕಾರಿಗಳು ಪರ್ಯಾಯ ಬಸ್ ವ್ಯವಸ್ಥೆ ಮಾಡಿ, ಪ್ರಯಾಣಿಕರನ್ನು ಅಂಕಲಗಿಗೆ ಕಳುಹಿಸಿದ್ದಾರೆ.

ಮಾಹಿತಿಯಂತೆ, ಇದೇ ಬಸ್ಸಿನ ಸ್ಟಬ್ ಆ್ಯಕ್ಸಲ್ ಸುಮಾರು ಮೂರು ತಿಂಗಳ ಹಿಂದೆಯೂ ಮುರಿದಿತ್ತು. ಆಗ ಅದನ್ನು ದುರಸ್ತಿ ಮಾಡಿ ಮತ್ತೆ ಸೇವೆಗೆ ಬಳಸಲಾಗುತ್ತಿತ್ತು ಎನ್ನಲಾಗಿದೆ. ಆದರೆ ಭಾನುವಾರ ರಾತ್ರಿ ಅದೇ ಭಾಗದಲ್ಲಿ ಮತ್ತೆ ಬಿರುಕು ಕಾಣಿಸಿಕೊಂಡು ಸ್ಟಬ್ ಆ್ಯಕ್ಸಲ್ ಮುರಿದು ಚಕ್ರ ಕಳಚಿ ಬಿದ್ದಿದೆ.

ಘಟನೆಗೆ ಸಂಬಂಧಿಸಿದಂತೆ ಕೆಎಸ್‌ಆರ್‌ಟಿಸಿ ಅಧಿಕಾರಿಗಳು ಉನ್ನತ ಅಧಿಕಾರಿಗಳಿಗೆ ವರದಿ ಸಲ್ಲಿಸಿದ್ದು, ಪ್ರಕರಣದ ಕುರಿತು ತನಿಖೆ ಆರಂಭಿಸಲಾಗಿದೆ.

Leave a Reply

Your email address will not be published. Required fields are marked *