ಕುಂದಾಪುರ: ಬೈಂದೂರು ತಾಲೂಕಿನ ಕೊಲ್ಲೂರು ಗ್ರಾಮದ ದಳಿಯಲ್ಲಿ ಮೇ 17ರಂದು ನಡೆದ ಭೀಕರ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದ ಕೇರಳದ ಇಬ್ಬರು ಮಹಿಳಾ ಯಾತ್ರಿಕರಲ್ಲಿ ಒಬ್ಬರ ಚಿನ್ನಾಭರಣ ಕಳವು ಪ್ರಕರಣವನ್ನು ಪೊಲೀಸರು ಕೇವಲ 24 ಗಂಟೆಗಳೊಳಗೆ ಭೇದಿಸಿದ್ದಾರೆ.

ಮೃತ ಮಹಿಳೆಯ ದೇಹದಲ್ಲಿದ್ದ ಚಿನ್ನಾಭರಣಗಳನ್ನು ಕಳವು ಮಾಡಲಾಗಿದೆ ಎಂದು ಶ್ರೀಕುಮಾರ್ ನೀಡಿದ ದೂರಿನ ಮೇರೆಗೆ ಕೊಲ್ಲೂರು ಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿತ್ತು.

ಕುಂದಾಪುರ ಉಪವಿಭಾಗದ ಡಿವೈಎಸ್‌ಪಿ ಎಚ್.ಡಿ. ಕುಲಕರ್ಣಿ ಮತ್ತು ಬೈಂದೂರು ವೃತ್ತ ನಿರೀಕ್ಷಕ ಶಿವಕುಮಾರ್ ಅವರ ಮಾರ್ಗದರ್ಶನದಲ್ಲಿ ಕಾರ್ಯಾಚರಣೆ ನಡೆಸಿದ ಕೊಲ್ಲೂರು ಪಿಎಸ್‌ಐ ವಿನಯ್ ಎಂ. ಕೊರ್ಲಹಳ್ಳಿ ನೇತೃತ್ವದ ಪೊಲೀಸ್ ತಂಡ ತನಿಖೆ ನಡೆಸಿತು. ತನಿಖಾ ತಂಡದಲ್ಲಿ ಹೆಡ್ ಕಾನ್‌ಸ್ಟೆಬಲ್‌ಗಳಾದ ನಾಗೇಂದ್ರ, ಲಕ್ಷ್ಮಣ್ ಗಾಣಿಗ, ರಾಘವೇಂದ್ರ ಹಾಗೂ ಪೊಲೀಸ್ ಕಾನ್‌ಸ್ಟೆಬಲ್ ನಾಗರಾಜ್ ಭಾಗಿಯಾಗಿದ್ದರು.

ಅಪಘಾತ ಸ್ಥಳದಲ್ಲಿ ಸಾರ್ವಜನಿಕರು ತೆಗೆದಿದ್ದ ಫೋಟೋಗಳು, ಸಿಸಿಟಿವಿ ದೃಶ್ಯಾವಳಿಗಳು ಮತ್ತು ತಾಂತ್ರಿಕ ಸಾಕ್ಷ್ಯಗಳ ಆಧಾರದ ಮೇಲೆ ಪೊಲೀಸರು ಕಾರ್ಯಾಚರಣೆ ನಡೆಸಿ, ಕೊಲ್ಲೂರು ಗ್ರಾಮದ ಕಲ್ಯಾಣಿಗುಡ್ಡೆ ನಿವಾಸಿ ಹೇಮಂತ್ (40) ಎಂಬಾತನನ್ನು ಬಂಧಿಸಿದ್ದಾರೆ.

ಬಂಧಿತನಿಂದ ಸುಮಾರು ರೂ. 2.07 ಲಕ್ಷ ಮೌಲ್ಯದ ಚಿನ್ನಾಭರಣಗಳು ಇದರಲ್ಲಿ ಸುಮಾರು ರೂ. 57,000 ಮೌಲ್ಯದ 3.910 ಗ್ರಾಂ ತೂಕದ ಚಿನ್ನದ ಉಂಗುರ, ಸುಮಾರು ರೂ. 50,000 ಮೌಲ್ಯದ 3.450 ಗ್ರಾಂ ತೂಕದ ಚಿನ್ನದ ಬಳೆ, ಸುಮಾರು ರೂ. 1 ಲಕ್ಷ ಮೌಲ್ಯದ 7.160 ಗ್ರಾಂ ತೂಕದ ಚಿನ್ನದ ಸರ ವಶಪಡಿಸಿಕೊಳ್ಳಲಾಗಿದೆ.

ಬಂಧಿತ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯವು ಆತನಿಗೆ ನ್ಯಾಯಾಂಗ ಬಂಧನ ವಿಧಿಸಿದೆ.


