ಬಂಟ್ವಾಳ: ಪ್ರಾಥಮಿಕ ಆರೋಗ್ಯ ಕೇಂದ್ರ ಕಲ್ಲಡ್ಕ-ಬಾಳ್ತಿಲ ವತಿಯಿಂದ ನರಿಕೊಂಬು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ನರಿಕೊಂಬು ಇಲ್ಲಿ ಕ್ಷಯರೋಗ (TB) ತಪಾಸಣಾ ಹಾಗೂ ಹೃದಯ ಎಕ್ಸ್-ರೇ ಶಿಬಿರ ಮೇ 21 ನೇ ಗುರುವಾರ ನಡೆಯಿತು.

ಕೇಂದ್ರ ಟಿಬಿ ವಿಭಾಗವು ನರಿಕೊಂಬು ಗ್ರಾಮವನ್ನು “ಹೈ ರಿಸ್ಕ್ ವಿಲೇಜ್” ಎಂದು ಗುರುತಿಸಿದ್ದ ಹಿನ್ನೆಲೆ, ಪಿಎಚ್‌ಸಿ ಕಲ್ಲಡ್ಕ-ಬಾಳ್ತಿಲ ವೈದ್ಯಾಧಿಕಾರಿ ಹಾಗೂ ಸಿಬ್ಬಂದಿಗಳು ಈ ಶಿಬಿರವನ್ನು ಆಯೋಜಿಸಿದರು. ದಕ್ಷಿಣ ಕನ್ನಡ ಜಿಲ್ಲಾ ಕ್ಷಯರೋಗ ಕೇಂದ್ರದ ಮೂಲಕ ಡಿಜಿಟಲ್ ಚೇಸ್ಟ್ ಎಕ್ಸ್-ರೇ ಸೌಲಭ್ಯ ಒದಗಿಸಲಾಗಿದ್ದು, ಶಿಬಿರದಲ್ಲಿ ಒಟ್ಟು 102 ಜನರ ತಪಾಸಣೆ ನಡೆಸಲಾಯಿತು.

ಕಾರ್ಯಕ್ರಮದಲ್ಲಿ ಕಲ್ಲಡ್ಕ-ಬಾಳ್ತಿಲ ಪ್ರಾಥಮಿಕ ಆರೋಗ್ಯ ಕೇಂದ್ರದ ಸಿಎಚ್‌ಒಗಳು, ತಾಲೂಕು ಆರೋಗ್ಯ ಕಚೇರಿಯ ಟಿಬಿ ಮೇಲ್ವಿಚಾರಕರು, ಜಿಲ್ಲಾ ತಂಡದ ರೇಡಿಯೋಗ್ರಫಿ ಇಮೇಜಿಂಗ್ ಅಧಿಕಾರಿಗಳು ಹಾಗೂ ಗ್ರಾಮ ವ್ಯಾಪ್ತಿಯ ಆಶಾ ಕಾರ್ಯಕರ್ತೆಯರು ಭಾಗವಹಿಸಿ ಶಿಬಿರವನ್ನು ಯಶಸ್ವಿಗೊಳಿಸಿದರು.



