Breaking
19 May 2026, Tue

ಬೆಳ್ತಂಗಡಿಯಲ್ಲಿ ಸರಣಿ ಕಳ್ಳತನ: 10 ಅಂಗಡಿ-ಕಚೇರಿಗಳ ಬೀಗ ಮುರಿದು ಲಕ್ಷಾಂತರ ರೂ. ದೋಚಿ ಪರಾರಿಯಾದ ಖದೀಮರು

ಬೆಳ್ತಂಗಡಿ: ಬೆಳ್ತಂಗಡಿ ನಗರ ಪ್ರದೇಶದಲ್ಲಿ ನಿನ್ನೆ ತಡರಾತ್ರಿ ಖದೀಮರು ಸರಣಿ ಕಳ್ಳತನ ನಡೆಸಿ, ಒಂದೇ ರಾತ್ರಿ ಸುಮಾರು 10 ಅಂಗಡಿ ಹಾಗೂ ಕಚೇರಿಗಳ ಬೀಗ ಮುರಿದು ಲಕ್ಷಾಂತರ ರೂಪಾಯಿ ನಗದು ದೋಚಿ ಪರಾರಿಯಾಗಿರುವ ಘಟನೆ ಬೆಳಕಿಗೆ ಬಂದಿದೆ.

ನಗರದ ಕೋರ್ಟ್ ರಸ್ತೆಯಲ್ಲಿರುವ ಧರ್ಮಶ್ರೀ ಬಿಲ್ಡಿಂಗ್‌ನ ‘ಸಮೃದ್ಧಿ ಎಂಟರ್‌ಪ್ರೈಸಸ್’ಗೆ ನುಗ್ಗಿದ ಕಳ್ಳರು, ಸಂಸ್ಥೆಯಲ್ಲಿದ್ದ ಸುಮಾರು 1.50 ಲಕ್ಷ ರೂ. ನಗದನ್ನು ಕಳವು ಮಾಡಿದ್ದಾರೆ. ಕಳ್ಳರು ತಮ್ಮ ಸುಳಿವು ಸಿಗಬಾರದೆಂಬ ಉದ್ದೇಶದಿಂದ ಅಲ್ಲಿದ್ದ ಸಿಸಿಟಿವಿ ಕ್ಯಾಮೆರಾಗಳನ್ನು ಹಾನಿಗೊಳಿಸಿ, ಮೆಮೊರಿ ಕಾರ್ಡ್ ಸಹ ತೆಗೆದುಕೊಂಡು ಪರಾರಿಯಾಗಿದ್ದಾರೆ ಎನ್ನಲಾಗಿದೆ.

ಇದೇ ಕಟ್ಟಡದಲ್ಲಿರುವ ಟಿ.ಎಚ್. ರಿಯಲ್ ಎಸ್ಟೇಟ್ ಕಚೇರಿ, ಕಟ್ಟಡ ಮಾಲೀಕರ ಕಚೇರಿ ಹಾಗೂ ವಕೀಲರಾದ ರಾಧಾಕೃಷ್ಣ, ಉಷಾ ಎನ್.ಜಿ. ಮತ್ತು ಯತೀಶ್ ಶೆಟ್ಟಿ ಪಿ. ಅವರ ಕಚೇರಿಗಳಿಗೂ ಕಳ್ಳರು ನುಗ್ಗಿ ಶೋಧ ನಡೆಸಿದ್ದಾರೆ.

ಇನ್ನೊಂದೆಡೆ, ಮೂರು ಮಾರ್ಗದ ಬಳಿ ಇರುವ ‘ಮಾತೃಶ್ರೀ ಹೋಟೆಲ್’ನಲ್ಲಿ ಡಬ್ಬಿಯಲ್ಲಿದ್ದ 5,000 ರೂ. ಹಾಗೂ ಡ್ರಾವರ್‌ನಲ್ಲಿದ್ದ 2,000 ರೂ. ನಗದು ಕಳುವಾಗಿದೆ. ಪಕ್ಕದ ‘ಶಬರಿ ಎಂಟರ್‌ಪ್ರೈಸಸ್’ನಿಂದ ಸುಮಾರು 2,000 ರೂ. ನಗದು ಕಳವಾಗಿದ್ದು, ವಕೀಲ ಜಯರಾಮ ಮಣಿಯಾಣಿ ಅವರ ಕಚೇರಿ, ಹಿಮಾಲಯ ಫೈನಾನ್ಸ್ ಮತ್ತು ಇನ್ವೆಸ್ಟ್‌ಮೆಂಟ್ ಹಾಗೂ ವಕೀಲ ಜಿತೇಶ್ ಕೆ. ಅವರ ಕಚೇರಿಗಳ ಬೀಗ ಮುರಿದು ಕಳ್ಳರು ಒಳನುಗ್ಗಿದ್ದಾರೆ.

ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ತನಿಖೆ ಮುಂದುವರಿಸಿದ್ದಾರೆ.

Leave a Reply

Your email address will not be published. Required fields are marked *