ಕಾಸರಗೋಡು: ಜಿಲ್ಲೆಯ ಬದಿಯಡ್ಕ ಸಮೀಪದ ಮಾರ್ಪನಡ್ಕದಲ್ಲಿ ನಡೆದ ಬ್ಯಾಂಕ್ ಕಾವಲುಗಾರ ಸುರೇಶ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತರನ್ನು ಕುಂಬ್ಡಾಜೆಯ ಕಿರಣ್ (30) ಹಾಗೂ ಕರುವತ್ತಡ್ಕದ ಅಖಿಲೇಶ್ (25) ಎಂದು ಗುರುತಿಸಲಾಗಿದೆ.

ಮೃತ ಸುರೇಶ್ (42) ಅವರು ಮಾರ್ಪನಡ್ಕ ಬೆದ್ರಕೂಡ್ಲುವಿನ ನಿವಾಸಿಯಾಗಿದ್ದು, ಕುಂಬ್ಡಾಜೆ ಸೇವಾ ಸಹಕಾರಿ ಬ್ಯಾಂಕ್‌ನಲ್ಲಿ ಕಾವಲುಗಾರರಾಗಿ ಕೆಲಸ ಮಾಡುತ್ತಿದ್ದರು. ಬ್ಯಾಂಕ್ ಆವರಣದಲ್ಲಿ ಇತ್ತೀಚೆಗೆ ನಡೆದ ಕ್ರಿಕೆಟ್ ಪಂದ್ಯಾಟದ ವಿಚಾರವಾಗಿ ಉಂಟಾದ ಮಾತಿನ ಚಕಮಕಿ ಬಳಿಕ ಗಲಾಟೆಗೆ ತಿರುಗಿದ ಹಿನ್ನೆಲೆ ಈ ದುರ್ಘಟನೆ ಸಂಭವಿಸಿದೆ ಎನ್ನಲಾಗಿದೆ.

ಘಟನೆಯ ವೇಳೆ ಆರೋಪಿಗಳ ತಂಡ ಸುರೇಶ್ ಅವರಿಗೆ ಚಾಕುವಿನಿಂದ ಇರಿದು ಗಂಭೀರವಾಗಿ ಗಾಯಗೊಳಿಸಿದ್ದು, ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ. ಈ ಘಟನೆ ಸ್ಥಳೀಯರಲ್ಲಿ ಭಾರೀ ಆತಂಕಕ್ಕೆ ಕಾರಣವಾಗಿತ್ತು.

ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಬದಿಯಡ್ಕ ಪೊಲೀಸರು ತಕ್ಷಣ ಕಾರ್ಯಾಚರಣೆ ಆರಂಭಿಸಿ, ಕೃತ್ಯ ನಡೆದ 24 ಗಂಟೆಯೊಳಗೆ ಇಬ್ಬರು ಪ್ರಮುಖ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ನಷ್ಟು ತನಿಖೆ ಮುಂದುವರಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ.


