ಬಂಟ್ವಾಳ: ಬೀದಿ ನಾಯಿ ಹಾಗೂ ಸಾಕು ನಾಯಿಗಳಿಗೆ ವಿಷ ಹಾಕಿ ಕೊಂದ ಕ್ರೂರ ಘಟನೆ ಬಂಟ್ವಾಳ ತಾಲೂಕಿನ ಅರಳ ಗ್ರಾಮದ ಕುಟ್ಟಿಕಳ ಎಂಬಲ್ಲಿ ಸಂಭವಿಸಿದ್ದು, ಪ್ರಾಣಿ ಪ್ರಿಯರ ಆಕ್ರೋಶಕ್ಕೆ ಕಾರಣವಾಗಿದೆ.

ಕುಟ್ಟಿಕಳ ಜಂಕ್ಷನ್ ನಲ್ಲಿ ಹಲವಾರು ಬೀದಿ ನಾಯಿಗಳಿದ್ದು, ಇದರ ಸಹಿತ ಸ್ಥಳೀಯರೋರ್ವರು ಅವರ ಸಾಕು ನಾಯಿಗಳಿಗೆ ನಿತ್ಯ ಅನ್ನಾಹಾರ ನೀಡುತ್ತಿದ್ದರು. ಆದರೆ ದುಷ್ಕರ್ಮಿಗಳು ನಾಯಿಗಳಿಗೆ ವಿಷ ಹಾಕಿದ ಪರಿಣಾಮ ಬೀದಿ ನಾಯಿಗಳ ಸಹಿತ ಸಾಕು ನಾಯಿಗಳೂ ಸಾವನ್ನಪ್ಪಿದ್ದಾವೆ. ಸುಮಾರು ಹತ್ತಕ್ಕೂ ಹೆಚ್ಚು ನಾಯಿಗಳು ಸಾವನ್ನಪ್ಪಿರುವುದಾಗಿ ತಿಳಿದು ಬಂದಿದೆ. ಆಹಾರದಲ್ಲಿ ವಿಷ ಬೆರೆಸಿದ್ದು, ಇದನ್ನು ತಿಂದ ನಾಯಿಗಳು ಗೋಳಿಡುತ್ತಾ ನರಳಿ ನರಳಿ ಸಾವನ್ನಪ್ಪಿರುವುದು ಹೃದಯ ವಿದ್ರಾವಕವಾಗಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.

ಘಟನೆಯಿಂದ ಪ್ರಾಣಿ ಪ್ರಿಯರ ಆಕ್ರೋಶಕ್ಕೆ ಕಾರಣವಾಗಿದ್ದು ಈ ಬಗ್ಗೆ ಸ್ಥಳೀಯ ಗ್ರಾಮ ಪಂಚಾಯತ್ ಹಾಗೂ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪ್ರಾಣಿಗಳಿಗೆ ವಿಷ ನೀಡುವುದು ಅಥವಾ ಹಿಂಸೆ ನೀಡುವುದು ಪ್ರಾಣಿಗಳ ಮೇಲಿನ ದೌರ್ಜನ್ಯ ತಡೆ ಕಾಯ್ದೆ ಪ್ರಕಾರ ಶಿಕ್ಷಾರ್ಹ ಅಪರಾಧವಾಗಿದ್ದು, ವಿಷ ಹಾಕಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.



