ಮೂಡುಬಿದಿರೆ : ವಾಲ್ಪಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಮಾಡದಂಗಡಿ ಪರಿಸರದ ಪಾಳುಬಿದ್ದ ಮನೆಯೊಂದರಲ್ಲಿ ಕೊಳೆತ ಸ್ಥಿತಿಯಲ್ಲಿದ್ದ ಅನಾಥ ಶವ ಪತ್ತೆಯಾದ ಘಟನೆ ಬೆಳಕಿಗೆ ಬಂದಿದೆ.

ಮೃತದೇಹವು ಸುಮಾರು ಮೂರುರಿಂದ ನಾಲ್ಕು ದಿನಗಳ ಹಿಂದೆ ಸಾವನ್ನಪ್ಪಿರಬಹುದೆಂದು ಶಂಕಿಸಲಾಗಿದ್ದು, ಶವ ಸಂಪೂರ್ಣ ಕೊಳೆತು ದುರ್ನಾಥ ಬೀರುತ್ತಿತ್ತು ಎನ್ನಲಾಗಿದೆ. ನೆರೆಮನೆಯವರೊಬ್ಬರ ನಾಯಿ ಕಾಣೆಯಾಗಿದ್ದ ಹಿನ್ನೆಲೆ, ಅದೇ ನಾಯಿ ಸತ್ತು ಹೋಗಿರಬಹುದೆಂದು ಹುಡುಕಿಕೊಂಡು ಹೋದ ವೇಳೆ ಪಾಳುಬಿದ್ದ ಮನೆಯಲ್ಲಿ ಈ ಶವ ಪತ್ತೆಯಾಗಿದೆ.

ಪ್ರಾಥಮಿಕ ಮಾಹಿತಿಯಂತೆ, ಕೇರಳ ಮೂಲದ ‘ಚೇಟ’ ಎಂಬಾತ ಈ ಭಾಗದಲ್ಲಿ ಸಣ್ಣಪುಟ್ಟ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದು, ಮದ್ಯಪಾನ ಮಾಡಿ ಅಲ್ಲಲ್ಲಿ ಮಲಗುತ್ತಿದ್ದ ಎನ್ನಲಾಗಿದೆ. ಪತ್ತೆಯಾದ ಶವ ಆತನದ್ದೇ ಆಗಿರಬಹುದೆಂದು ಶಂಕಿಸಲಾಗಿದೆ.

ಘಟನಾ ಸ್ಥಳಕ್ಕೆ ಮೂಡುಬಿದಿರೆ ಪೊಲೀಸ್ ಠಾಣೆಯ ಎಸ್.ಐ. ಪ್ರತಿಭಾ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣದ ಕುರಿತು ತನಿಖೆ ಮುಂದುವರಿದಿದೆ.


