Breaking
18 May 2026, Mon

ಕೊಡಚಾದ್ರಿ ದಳಿಯಲ್ಲಿ ಭೀಕರ ಅಪಘಾತ; ಕೇರಳ ಮೂಲದ ಇಬ್ಬರು ಪ್ರವಾಸಿಗರ ದುರ್ಮರಣ

ಉಡುಪಿ: ಮೀನು ಸಾಗಾಟದ ವಾಹನ ಮತ್ತು ಜೀಪ್ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಕೇರಳ ಮೂಲದ ಇಬ್ಬರು ಪ್ರವಾಸಿಗರು ಮೃತಪಟ್ಟಿದ್ದು, ಎಂಟು ಮಂದಿ ಗಂಭೀರವಾಗಿ ಗಾಯಗೊಂಡ ಘಟನೆ ಕೊಲ್ಲೂರು ಸಮೀಪದ ಕೊಡಚಾದ್ರಿಯ ದಳಿ ಪ್ರದೇಶದಲ್ಲಿ ನಡೆದಿದೆ.

ಮೃತರನ್ನು ಜ್ಯೋತಿ(34) ಹಾಗೂ ಅನೂಪ್(26) ಎಂದು ಗುರುತಿಸಲಾಗಿದೆ. ಗಾಯಗೊಂಡವರನ್ನು ಆಯನ್, ಅವನಿ, ಅರ್ಜುನ್, ಮಿನಿ, ಅಬೆ, ಅನೂಪ್, ಜ್ಯೋತಿ ಹಾಗೂ ಜೀಪ್ ಚಾಲಕ ದೇವರಾಜ್ ಎಂದು ಗುರುತಿಸಲಾಗಿದೆ.

ಮಾಹಿತಿಯಂತೆ, ಕೇರಳ ಮೂಲದ ಪ್ರವಾಸಿಗರು ಕೊಲ್ಲೂರು ದೇವಿಯ ದರ್ಶನ ಮುಗಿಸಿ ಕೊಡಚಾದ್ರಿಗೆ ತೆರಳಿ ವಾಪಸ್ಸಾಗುತ್ತಿದ್ದ ವೇಳೆ, ಮಲ್ಪೆಯಿಂದ ಶಿವಮೊಗ್ಗದತ್ತ ಸಾಗುತ್ತಿದ್ದ ಮೀನು ಸಾಗಾಟದ ವಾಹನ ಜೀಪ್‌ಗೆ ಡಿಕ್ಕಿ ಹೊಡೆದಿದೆ. ಅಪಘಾತ ಸಂಭವಿಸಿದ ಸ್ಥಳ ಇಳಿಜಾರು ಪ್ರದೇಶವಾಗಿರುವುದರಿಂದ ವಾಹನ ನಿಯಂತ್ರಣ ತಪ್ಪಿ ಈ ದುರಂತ ಸಂಭವಿಸಿದೆ ಎನ್ನಲಾಗಿದೆ.

ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡವರನ್ನು ತಕ್ಷಣ ಕುಂದಾಪುರ, ಉಡುಪಿ ಹಾಗೂ ಮಣಿಪಾಲದ ವಿವಿಧ ಆಸ್ಪತ್ರೆಗಳಿಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಘಟನೆ ಕುರಿತು ಮಾಹಿತಿ ತಿಳಿಯುತ್ತಿದ್ದಂತೆ ಕೊಲ್ಲೂರು ಪೊಲೀಸ್ ಠಾಣೆಯ ಪಿಎಸ್ಐಗಳಾದ ವಿನಯ್ ಎಂ. ಕೊರ್ಲಹಳ್ಳಿ ಹಾಗೂ ಭೀಮಾಶಂಕರ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ಸಂಬಂಧ ಕೊಲ್ಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.

Leave a Reply

Your email address will not be published. Required fields are marked *