ಮಂಗಳೂರು: ಹವಾಮಾನ ವೈಪರಿತ್ಯದ ಹಿನ್ನೆಲೆ ಮಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದ ಎರಡು ವಿಮಾನಗಳು ಅರ್ಧ ಗಂಟೆ ಕಾಲ ಆಕಾಶದಲ್ಲೇ ಸುತ್ತಾಡಿ ಬಳಿಕ ತಡವಾಗಿ ಲ್ಯಾಂಡ್ ಆದ ಘಟನೆ ವರದಿಯಾಗಿದೆ.

ದಕ್ಷಿಣ ಕನ್ನಡ ಜಿಲ್ಲೆಯ ಹಲವೆಡೆ ಮಳೆಯಾಗುತ್ತಿದ್ದು, ವಿಮಾನ ನಿಲ್ದಾಣದ ಸುತ್ತಮುತ್ತಲೂ ಮಳೆ ಹಾಗೂ ಮೋಡ ಕವಿದ ವಾತಾವರಣ ನಿರ್ಮಾಣವಾಗಿದ್ದರಿಂದ ವಿಮಾನಗಳ ಲ್ಯಾಂಡಿಂಗ್ಗೆ ಅಡಚಣೆ ಉಂಟಾಯಿತು ಎನ್ನಲಾಗಿದೆ.
ವಿಮಾನಗಳು ವಿಟ್ಲ ಭಾಗದ ಆಕಾಶದಲ್ಲಿ ಹಲವು ಸುತ್ತು ಹಾಕಿದ ಬಳಿಕ ಪರಿಸ್ಥಿತಿ ಅನುಕೂಲಕರವಾದ ನಂತರವೇ ಲ್ಯಾಂಡ್ ಆಗಿವೆ.

ತೀರ ಕೆಳಭಾಗದಲ್ಲೇ ವಿಮಾನಗಳು ಹಾರಾಟ ನಡೆಸಿದ್ದರಿಂದ ವಿಟ್ಲ ಭಾಗದ ಜನರು ಕೆಲಕಾಲ ಆತಂಕಕ್ಕೊಳಗಾದರು. ಬಳಿಕ ಎರಡೂ ವಿಮಾನಗಳು ಸುರಕ್ಷಿತವಾಗಿ ಮಂಗಳೂರು ವಿಮಾನ ನಿಲ್ದಾಣದಲ್ಲಿ ಇಳಿದಿವೆ ಎಂದು ತಿಳಿದುಬಂದಿದೆ.



