Breaking
2 Jul 2026, Thu

ನಕಲಿ ಪಾಸ್ಪೋರ್ಟ್ ಜಾಲ ಭೇದಿಸಿದ ಸಿಎಸ್ಬಿ ಪೊಲೀಸರು

ಮಂಗಳೂರು : ಬೇರೊಬ್ಬರ ಗುರುತಿನ ದಾಖಲೆಗಳನ್ನು ದುರುಪಯೋಗಪಡಿಸಿ ನಕಲಿ ಪಾಸ್ಪೋರ್ಟ್ ಸೃಷ್ಟಿಸಿ ವಿದೇಶ ಪ್ರಯಾಣ ನಡೆಸಿದ ವಂಚನಾ ಜಾಲವನ್ನು ಸಿಎಸ್ಬಿ ಪೊಲೀಸರು ಭೇದಿಸಿದ್ದಾರೆ.

ಉಳ್ಳಾಲ ನಿವಾಸಿಗಳಾದ ಪ್ರೀತಾ ಡಿ’ಸೋಜಾ, ಪ್ರೇಮ್ ಡಿ’ಸೋಜಾ ಹಾಗೂ ಯಶೋಧ ಕೇಶವ ಸೇರಿದಂತೆ ಹಲವರ ವಿರುದ್ಧ ಗಂಭೀರ ಆರೋಪಗಳಡಿ ಕ್ರಿಮಿನಲ್ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆಯನ್ನು ಚುರುಕುಗೊಳಿಸಿದ್ದಾರೆ.

ಯಶೋಧ ಕೇಶವ ಎಂಬ ಮಹಿಳೆಯ ಹೆಸರಿನಲ್ಲಿ ಅನ್ಯ ಮಹಿಳೆಯೊಬ್ಬರು ಪಾಸ್ಪೋರ್ಟ್ ಪಡೆದು ವಿದೇಶಕ್ಕೆ ತೆರಳಿರುವ ಕುರಿತು ಪೊಲೀಸರಿಗೆ ಗೌಪ್ಯ ಮಾಹಿತಿ ಲಭಿಸಿತ್ತು. ಈ ಮಾಹಿತಿ ಆಧರಿಸಿ ಸಿಎಸ್ಬಿ ಪೊಲೀಸರು ತನಿಖೆ ಆರಂಭಿಸಿದಾಗ ಅಚ್ಚರಿಯ ಸಂಗತಿಗಳು ಬೆಳಕಿಗೆ ಬಂದಿವೆ.

ಪಾಸ್‌ಪೋರ್ಟ್ ನಲ್ಲಿ ಹೆಸರು ಹಾಗೂ ವಿಳಾಸ ಯಶೋಧ ಕೇಶವ ಅವರದ್ದಾಗಿದ್ದರೂ, ಅದರಲ್ಲಿ ಬಳಸಲಾಗಿದ್ದ ಭಾವಚಿತ್ರ ಪ್ರೀತಾ ಡಿ’ಸೋಜಾ ಅವರದ್ದಾಗಿರುವುದು ತನಿಖೆಯಲ್ಲಿ ಪತ್ತೆಯಾಗಿದೆ.

ಪ್ರೀತಾ ಡಿ’ಸೋಜಾ ಅವರನ್ನು ಅಕ್ರಮವಾಗಿ ಇಸ್ರೇಲ್ಗೆ ಕಳುಹಿಸುವ ಉದ್ದೇಶದಿಂದ ಸಂಚು ರೂಪಿಸಲಾಗಿತ್ತು ಎಂದು ಪೊಲೀಸರು ಶಂಕಿಸಿದ್ದಾರೆ. ಈ ಕೃತ್ಯದ ಪ್ರಮುಖ ಸೂತ್ರಧಾರ ಉಳ್ಳಾಲ ಮೂಲದ ವ್ಯಕ್ತಿಯಾಗಿದ್ದು, ನಕಲಿ ದಾಖಲೆ ಸಿದ್ಧಪಡಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದಾನೆ ಎನ್ನಲಾಗಿದೆ.

ಯಶೋಧ ಕೇಶವ ಅವರ ಶೈಕ್ಷಣಿಕ ದಾಖಲೆಗಳು, ವಿಳಾಸ ಪುರಾವೆಗಳು ಹಾಗೂ ಇತರೆ ಅಧಿಕೃತ ದಾಖಲೆಗಳನ್ನು ಬಳಸಿ ಅಧಿಕಾರಿಗಳನ್ನು ದಾರಿ ತಪ್ಪಿಸಿ ಪಾಸ್ಪೋರ್ಟ್ ಮಾಡಿಸಲಾಗಿದೆ ಎಂದು ತನಿಖೆಯಲ್ಲಿ ತಿಳಿದುಬಂದಿದೆ.
ಅಕ್ರಮ ಪಾಸ್ಪೋರ್ಟ್ ಬಳಸಿ ಪ್ರೀತಾ ಡಿ’ಸೋಜಾ ಅವರು 2020ರ ಮಾರ್ಚ್ 17ರಂದು ಮುಂಬೈ ವಿಮಾನ ನಿಲ್ದಾಣದ ಮೂಲಕ ವಿದೇಶಕ್ಕೆ ತೆರಳಿರುವ ಮಾಹಿತಿ ಕೂಡ ಪೊಲೀಸರಿಗೆ ಲಭಿಸಿದೆ.

ಈ ಕುರಿತು ಸಿಎಸ್ಬಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.

Leave a Reply

Your email address will not be published. Required fields are marked *