ಮಂಗಳೂರು: ಕುಂಟಿಕಾನ ಫ್ಲೈಓವರ್ ಬಳಿ ವಾಹನವನ್ನು ಅಡ್ಡಗಟ್ಟಿ ಇತರ ವಾಹನಗಳ ಸಂಚಾರಕ್ಕೆ ಅಡ್ಡಿಪಡಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಉರ್ವ ಪೊಲೀಸ್ ಠಾಣೆಯಲ್ಲಿ ಇಬ್ಬರು ದ್ವಿಚಕ್ರ ವಾಹನ ಸವಾರರ ವಿರುದ್ಧ ಪ್ರಕರಣ ದಾಖಲಾಗಿದೆ.

ಆರೋಪಿಗಳನ್ನು ಮಂಗಳೂರು ನಗರದ ಕುಂಜತ್ತಬೈಲ್ ನಿವಾಸಿ ತನ್ಸೀರ್ (25) ಹಾಗೂ ಗದಗ ಜಿಲ್ಲೆಯ ನರಗುಂದ ತಾಲೂಕಿನ ತಂಡಾಪುರ ಓಣಿಯ ಚಂದ್ರಶೇಖರ್ (55) ಎಂದು ಗುರುತಿಸಲಾಗಿದೆ.

ಕಾವೂರಿನಿಂದ ಮಂಗಳೂರಿನತ್ತ ಬರುವ ರಸ್ತೆಯಾದ ಕುಂಟಿಕಾನ ಫ್ಲೈಓವರ್ ಬಳಿ ಇಬ್ಬರೂ ತಮ್ಮ ದ್ವಿಚಕ್ರ ವಾಹನಗಳನ್ನು ರಸ್ತೆಗೆ ಅಡ್ಡವಾಗಿ ನಿಲ್ಲಿಸಿ, ಪರಸ್ಪರ ವಾಗ್ವಾದ ನಡೆಸುತ್ತಾ ಸಾರ್ವಜನಿಕರ ಸಂಚಾರಕ್ಕೆ ಅಡ್ಡಿಪಡಿಸಿದರೆಂದು ತಿಳಿದುಬಂದಿದೆ.

ಈ ಮೊದಲು ವಾಹನವನ್ನು ಅಡ್ಡಾದಿಡ್ಡಿಯಾಗಿ ಚಲಾಯಿಸಿದ ವಿಚಾರಕ್ಕೆ ಸಂಬಂಧಿಸಿ ಇವರ ನಡುವೆ ಗಲಾಟೆ ಉಂಟಾಗಿದ್ದು, ಅದೇ ಕಾರಣಕ್ಕೆ ಈ ಘಟನೆ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.



