ಸುಳ್ಯ: ಪೆರಾಜೆ ಸಮೀಪದ ಕಲ್ಚರ್ಪೆಯಲ್ಲಿ ಸುಮಾರು 25 ಅಡಿ ಆಳದ ಪಾಳುಬಿದ್ದ ಬಾವಿಗೆ ಕಾಡಾನೆ ಬಿದ್ದಿದ್ದು, ಅರಣ್ಯ ಇಲಾಖೆ ಯಶಸ್ವಿಯಾಗಿ ರಕ್ಷಿಸಿದ ಘಟನೆ ನಡೆದಿದೆ.

ಏ. 12 ರಂದು ಕಾಡಾನೆ ರಾಮ ನಾಯ್ಕ ಅವರ ತೋಟದ ಅಂಚಿನಲ್ಲಿದ್ದ ಪಾಳುಬಿದ್ದ ಬಾವಿಗೆ ಬಿದ್ದಿತ್ತು. ಆನೆಯ ಚೀರಾಟ ಕೇಳಿದ ಮನೆಯವರು ತಕ್ಷಣವೇ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ.

ಮಾಹಿತಿ ಪಡೆದ ಅರಣ್ಯ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ಹಿಟಾಚಿ ಯಂತ್ರದ ಸಹಾಯದಿಂದ ಬಾವಿಯೊಳಗೆ ಇಳಿಜಾರು ಹಾದಿಯನ್ನು ನಿರ್ಮಿಸಿದರು. ಬಳಿಕ ಅದೇ ದಾರಿಯಿಂದ ಆನೆ ಸುರಕ್ಷಿತವಾಗಿ ಮೇಲಕ್ಕೆ ಬಂದಿದೆ.

ಬಾವಿಯಿಂದ ಹೊರಬಂದ ನಂತರ ಆನೆ ತೋಟದ ಮೇಲ್ಭಾಗದಲ್ಲಿದ್ದ ರಾಷ್ಟ್ರೀಯ ಹೆದ್ದಾರಿಯತ್ತ ನುಗ್ಗಿದ್ದರಿಂದ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಹಿಟಾಚಿ ಯಂತ್ರದ ಬಳಿಯಿಂದ ಸಾಗಿದ ಆನೆ ಮೊದಲು ತೋಟದ ಕೆಳಭಾಗಕ್ಕೆ ಧಾವಿಸಿ ನಂತರ ಅರಣ್ಯ ಇಲಾಖೆ ಸಿಬ್ಬಂದಿ ಪಟಾಕಿ ಸಿಡಿಸಿ ಆನೆಯನ್ನು ಜನವಸತಿ ಪ್ರದೇಶದಿಂದ ದೂರ ಓಡಿಸಿದರು. ಕೊನೆಗೆ ಆನೆ ಪೂಮಲೆ ಅರಣ್ಯ ಶ್ರೇಣಿಯತ್ತ ತೆರಳಿದೆ.



